ಸಾರಾಂಶ
ಮೇರಠ್: ಪತ್ನಿಯ ಹುಟ್ಟುಹಬ್ಬಕ್ಕೆ ಸರ್‌ಪ್ರೈಸ್ ನೀಡಲೆಂದು ಲಂಡನ್‌ನಿಂದ ಊರಿಗೆ ಬಂದಿದ್ದ ನೌಕಾಧಿಕಾರಿಯನ್ನು ಆತನ ಪತ್ನಿ ಮತ್ತು ಪ್ರಿಯತಮ ಸೇರಿ ಹತ್ಯೆಗೈದು ಬಳಿಕ 15 ತುಂಡುಗಳಾಗಿ ಕತ್ತರಿಸಿದ ಭೀಕರ ಘಟನೆ ಉತ್ತರಪ್ರದೇಶದ ಮೇರಠ್‌ನಲ್ಲಿ ನಡೆದಿದೆ. ಇಷ್ಟು ಮಾತ್ರವಲ್ಲದೇ ಹತ್ಯೆ ಬಳಿಕ ಸಾಕ್ಷ್ಯನಾಶದ ನಿಟ್ಟಿನಲ್ಲಿ ಶವದ ತುಂಡುಗಳನ್ನು ಡ್ರಮ್‌ನಲ್ಲಿಟ್ಟು ಅದರ ಮೇಲೆ ಸಿಮೆಂಟ್ ಹಾಕಿ ಸೀಲ್ ಮಾಡುವ ಮೂಲಕ ಪೈಶಾಚಿಕ ಕೃತ್ಯವನ್ನೂ ಆರೋಪಿಗಳು ಎಸಗಿದ್ದಾರೆ.
ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡುತ್ತಿದ್ದ ಸೌರಭ್ ರಜಪೂತ್ (35) ಹತ್ಯೆಯಾದ ಅಧಿಕಾರಿ. ಆತನ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಹತ್ಯೆ ಆರೋಪಿಗಳು.
ಮುಸ್ಕಾನ್ ಮತ್ತು ಸೌರಭ್ 2016ರಲ್ಲಿ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಓರ್ವ ಪುತ್ರಿ ಇದ್ದಾಳೆ. ಲಂಡನ್‌ನಲ್ಲಿ ನೆಲೆಸಿದ್ದ ಸೌರಭ್ ಮಾ.4ರಂದು ಪತ್ನಿ ಹುಟ್ಟುಹಬ್ಬಕ್ಕಾಗಿ ಮನೆಗೆ ಬಂದಿದ್ದ. ಈ ಸಂದರ್ಭದಲ್ಲಿ ಸಾಹಿಲ್ ಜೊತೆ ಸೇರಿ ಸೌರಭ್‌ನನ್ನು ಮುಸ್ಕಾನ್ ಇರಿದು ಕೊಂದಿದ್ದಾಳೆ. ಬಳಿಕ ದೇಹವನ್ನು 15 ತುಂಡು ಮಾಡಿ, ಆ ತುಂಡುಗಳನ್ನು ಪ್ಲಾಸ್ಟಿಕ್ ಡ್ರಮ್‌ನಲ್ಲಿ ಹಾಕಿ ಅದಕ್ಕೆ ಸಿಮೆಂಟ್ ಮುಚ್ಚಿ ಸೀಲ್ ಮಾಡಿದ್ದಾರೆ.
ಈ ಕೃತ್ಯದ ಬಳಿಕ ಮುಸ್ಕಾನ್ ಸಾಹಿಲ್ ಜೊತೆ ಗಿರಿಧಾಮಕ್ಕೆ ಟ್ರಿಪ್ ಹೋಗಿದ್ದಳು. ಪ್ರಕರಣದ ದಾರಿ ತಪ್ಪಿಸಲು ಸೌರಭ ಮೊಬೈಲ್‌ನಿಂದ ಆತನ ಕುಟುಂಬದವರಿಗೆ ಸಂದೇಶ ಕಳುಹಿಸಿದ್ದಾಳೆ. ಅಲ್ಲದೇ ಆತನ ಫೋನ್‌ನಿಂದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ಸೌರಭ್ ಫೋನ್‌ಗೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಅನುಮಾನದ ಮೇರೆಗೆ ಮುಸ್ಕಾನ್ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಮಗಳನ್ನು ಗಲ್ಲಿಗೇರಿಸಿ- ಪೋಷಕರು:
ಸೌರಭ್ ಹತ್ಯೆ ಸಂಬಂಧ ಪೋಷಕರು ಅಳಿಯನ ಬೆನ್ನಿಗೆ ನಿಂತಿದ್ದಾರೆ. ಸೌರಭ್ ತನ್ನ ಹೆಂಡತಿಯನ್ನು ಕುರುಡಾಗಿ ಪ್ರೀತಿಸಿದ್ದ. ಮಗಳಲ್ಲಿಯೇ ತಪ್ಪುಗಳಿತ್ತು. ಅವಳು ಸೌರಭ್‌ನನ್ನು ಕುಟುಂಬದಿಂದ ದೂರ ಮಾಡಿದ್ದಳು. ಅವಳನ್ನು ಮತ್ತು ಸಾಹಿಲ್‌ನ್ನು ಗಲ್ಲಿಗೇರಿಸಬೇಕು. ಆಕೆ ಬದುಕುವ ಹಕ್ಕನ್ನು ಕಳೆದುಕೊಂಡಿದ್ದಾಳೆ ಎಂದು ಮುಸ್ಕಾನ್ ಪೋಷಕರು ಆಗ್ರಹಿಸಿದ್ದಾರೆ.