ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆ ಬ್ಯಾಗ್‌ನಲ್ಲಿದ್ದ 9 ಲಕ್ಷ ರು. ಮೌಲ್ಯದ 154 ಗ್ರಾಂ ಚಿನ್ನಾಭರಣ ಕಳವು

| Published : Aug 19 2024, 01:46 AM IST / Updated: Aug 19 2024, 04:32 AM IST

ಸಾರಾಂಶ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ದುಷ್ಕರ್ಮಿಗಳು ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು 9 ಲಕ್ಷ ರು. ಮೌಲ್ಯದ 154 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

  ಬೆಂಗಳೂರು :  ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ದುಷ್ಕರ್ಮಿಗಳು ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಸುಮಾರು 9 ಲಕ್ಷ ರು. ಮೌಲ್ಯದ 154 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ. ಬಸವನಗರದ ರಾಮರೆಡ್ಡಿ ಕಾಲೋನಿ ನಿವಾಸಿ ಎಸ್‌.ಎನ್‌.ಕಲ್ಪನಾ ಚಿನ್ನಾಭರಣ ಕಳೆದುಕೊಂಡವರು. ಆ.15ರಂದು ಮೆಜೆಸ್ಟಿಕ್‌ನಿಂದ ಹಾಸನಕ್ಕೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುವಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ. ಕಲ್ಪನಾ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಸ್‌ನಲ್ಲೇ ಕಳ್ಳತನ

ದೂರುದಾರ ಮಹಿಳೆ ಹಾಸನಕ್ಕೆ ತೆರಳಲು ಆ.15 ಬೆಳಗ್ಗೆ ಮನೆಯಲ್ಲಿದ್ದ 154 ಗ್ರಾಂ ಚಿನ್ನಾಭರಣಗಳನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇರಿಸಿಕೊಂಡಿದ್ದಾರೆ. ಬಳಿಕ ತಮ್ಮ ಪತಿ ಜತೆಗೆ ಬೈಕ್‌ನಲ್ಲಿ ಎಚ್‌ಎಎಲ್‌ ಮುಖ್ಯ ಗೇಟ್‌ವರೆಗೆ ಡ್ರಾಪ್‌ ಪಡೆದಿದ್ದಾರೆ. ಬಳಿಕ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಬಂದಿದ್ದಾರೆ. ನಂತರ ಬೆಳಗ್ಗೆ 8 ಗಂಟೆಗೆ ಹಾಸನಕ್ಕೆ ತೆರಳಲು ಬಸ್‌ ಹತ್ತಿದ್ದಾರೆ. ಬಸ್‌ ಸ್ವಲ್ಪ ದೂರ ಚಲಿಸಿದ ಬಳಿಕ ವ್ಯಾನಿಟಿ ಬ್ಯಾಗ್‌ ನೋಡಿದಾಗ ಬ್ಯಾಗ್‌ನ ಜಿಪ್‌ ಕೊಂಚ ತೆರೆದಿರುವುದು ಕಂಡು ಬಂದಿದ್ದು, ಜಿಪ್‌ ಸರಿ ಮಾಡಿದ್ದಾರೆ.

ಕುಣಿಗಲ್‌ ಬಳಿ ವ್ಯಾನಿಟಿ ಬ್ಯಾಗ್ ತೆರೆದು ನೋಡಿದಾಗ ಚಿನ್ನಾಭರಣಗಳು ಇಲ್ಲದಿರುವುದು ಕಂಡು ಬಂದಿದೆ. ಬಳಿಕ ಬಸ್‌ ನಿರ್ವಾಹಕನ ಜತೆಗೆ ಕುಣಿಗಲ್‌ ಪೊಲೀಸ್‌ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಈ ವೇಳೆ ಪೊಲೀಸರು ತಾವು ಬಸ್‌ ಹತ್ತಿದ ಸ್ಥಳದ ವ್ಯಾಪ್ತಿಯ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.