ಮೈಕ್ರೋ ಫೈನಾನ್ಸ್‌ ಕಿರುಕುಳದಿಂದ ಮಹಿಳೆ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನ..!

| Published : Jan 29 2025, 01:30 AM IST

ಸಾರಾಂಶ

ಬಡ ಜನರಿಗೆ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ನೀಡುತ್ತಿರುವ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಾಲಕ್ಕೆ ಹೆದರಿ ಸಾವಿಗೆ ಶರಣಾಗುವ ಮತ್ತು ಆತ್ಮಹತ್ಯೆ ಯತ್ನ ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ. ಅದೇ ರೀತಿ ಮೈಕ್ರೋ ಫೈನಾನ್ಸ್‌ ಸಂಸ್ಥೆಯವರ ಕಿರುಕುಳಕ್ಕೆ ಮಳವಳ್ಳಿ ತಾಲೂಕಿನ ಕೊನ್ನಾಪುರ ಗ್ರಾಮದ ಮಹಿಳೆಯೊಬ್ಬರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಬಡ ಜನರಿಗೆ ಮೈಕ್ರೋ ಫೈನಾನ್ಸ್‌ ಸಂಸ್ಥೆಗಳು ನೀಡುತ್ತಿರುವ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಾಲಕ್ಕೆ ಹೆದರಿ ಸಾವಿಗೆ ಶರಣಾಗುವ ಮತ್ತು ಆತ್ಮಹತ್ಯೆ ಯತ್ನ ಪ್ರಕರಣಗಳು ನಿತ್ಯ ವರದಿಯಾಗುತ್ತಿವೆ.

ಅದೇ ರೀತಿ ಸಾಲ ಪಾವತಿಸಿಲ್ಲ ಎಂದು ಖಾಸಗಿ ಫೈನಾನ್ಸ್ ಕಂಪನಿಯವರು ಮನೆಯನ್ನು ಮುಟ್ಟುಗೋಲು ಹಾಕಿಕೊಂಡ ಪರಿಣಾಮ ಇಲ್ಲಿಗೆ ಸಮೀಪದ ಕೊನ್ನಾಪುರ ಗ್ರಾಮದ ಮಹಿಳೆಯೊಬ್ಬರು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಗ್ರಾಮದ ಪ್ರೇಮಾ (59) ಎಂಬ ಮಹಿಳೆಗೆ ಸಾವಿಗೆ ಶರಣಾಗಲು ಯತ್ನಿಸಿದವರಾಗಿದ್ದಾರೆ.

ಮಳವಳ್ಳಿ ಟಿಎಪಿಸಿಎಂಎಸ್‌ನಲ್ಲಿ ದಿನಗೂಲಿ ನೌಕರಳಾಗಿ ಕೆಲಸ ಮಾಡುತ್ತಿದ್ದ ಈಕೆ ಮನೆ ನಿರ್ಮಿಸಲು 2018ರಲ್ಲಿ ಖಾಸಗಿ ಫೈನಾನ್ಸ್ ನಲ್ಲಿ 6 ಲಕ್ಷ ರು. ಸಾಲ ಪಡೆದಿದ್ದರು. ಸಾಲದ 7 ಕಂತುಗಳು ವಿಳಂಬ ಪಾವತಿಯಾದ ಹಿನ್ನೆಲೆಯಲ್ಲಿ ಫೈನಾನ್ಸ್ ಕಂಪನಿ ಪ್ರೇಮಾ ವಿರುದ್ಧ ಫೈನಾನ್ಸ್ ಸಿಬ್ಬಂದಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ಒಂದು ವಾರದ ಹಿಂದೆ ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿ ಅಧಿಕಾರಿಗಳು, ಪೊಲೀಸ್ ಭದ್ರತೆಯಲ್ಲಿ ಮನೆಗೆ ಬೀಗ ಹಾಕಿಸಿ, ಮನೆಯನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

ಮನೆ ಕಳೆದುಕೊಂಡ ಪ್ರೇಮಾ ಮತ್ತು ಮನೆಯವರು ತಮ್ಮ ಹತ್ತಿರದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಘಟನೆಯಿಂದ ಮನನೊಂದ ಪ್ರೇಮ ಮಂಗಳವಾರ ಬೆಳಗ್ಗೆ 11 ಗಂಟೆಯ ಸುಮಾರಿನಲ್ಲಿ ನಿದ್ರೆ ಮಾತ್ರೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಮಾತ್ರೆ ಸೇವಿಸಿ ಅಸ್ವಸ್ಥರಾದ ಪ್ರೇಮಾರನ್ನು ಕುಟುಂಬದ ಸದಸ್ಯರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರೇಮಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.