ಸಾರಾಂಶ
ಮದ್ದೂರು ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಬಳಿ ಭಾನುವಾರ ಸಂಜೆ ಆಟೋ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸತ್ತವರ ಸಂಖ್ಯೆ ಎರಡಕ್ಕೆ ಏರಿದೆ.
ಮದ್ದೂರು : ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಬಳಿ ಭಾನುವಾರ ಸಂಜೆ ಆಟೋ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಸತ್ತವರ ಸಂಖ್ಯೆ ಎರಡಕ್ಕೆ ಏರಿದೆ.
ಮಂಡ್ಯ ತಾಲೂಕು ಆಲಕೆರೆ ಗ್ರಾಮದ ಪ್ರಸನ್ನರ ಪತ್ನಿ ಶ್ವೇತಾ (30) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ಕೊನೆ ಉಸಿರೆಳೆದಿದ್ದಾರೆ.
ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಶ್ವೇತಾ ಆಟೋದಲ್ಲಿ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಸರ್ವಿಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಆಟೋ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.
ಅಪಘಾತದಲ್ಲಿ ಶ್ವೇತಾ ಅವರ ಕಾಲು ತುಂಡಾಗಿ ಹೊಟ್ಟೆ ಮತ್ತಿತರ ಭಾಗಗಳಿಗೆ ತೀವ್ರವಾಗಿ ಗಾಯವಾಗಿತ್ತು. ಈಕೆಗೆ ಮಂಡ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಅಪಘಾತದಲ್ಲಿ ಸುಮಾರು 55 ವರ್ಷದ ವ್ಯಕ್ತಿ ಮೃತಪಟ್ಟಿದ್ದು, ಈತನ ಗುರುತು ಪತ್ತೆಯಾಗಿಲ್ಲ. ಅಪಘಾತಕ್ಕೀಡಾದ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಂಡ್ಯ ತಾಲೂಕು ಹೊನಗಾನಹಳ್ಳಿಮಠದ ಭಾಗ್ಯಮ್ಮ, ಜವರಮ್ಮ, ಬಿಹಾರ್ ಮೂಲದ ರಾಮು, ಮದ್ದೂರು ತಾಲೂಕು ಸಾದೊಳಲು ಗ್ರಾಮದ ಶ್ರೀನಿಧಿ, ಸುಮತಿ, ಸಾವಿತ್ರಮ್ಮ, ಸುಷ್ಮಾ, ಗೆಜ್ಜಲಗೆರೆಯ ಭಾವನ, ಭಾಗ್ಯಮ್ಮ, ಕುದರಗುಂಡಿಯ ಚಾಂದಿನಿ, ಲಿಖಿತ್, ಮಕ್ಕಳಾದ ಪ್ರೀತಮ್, ಜೀವಿತ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳೆಲ್ಲರೂ ಈಗ ಮಂಡ್ಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.
ಸಾರಿಗೆ ಇಲಾಖೆ ನಿಯಮದ ಪ್ರಕಾರ ಅಪೆ ಆಟೋದಲ್ಲಿ ಆರು ಮಂದಿ ಮಾತ್ರ ಪ್ರಯಾಣಿಸಲು ಪರವಾನಗಿ ಇದೆ. ಆದರೆ, ಮಂಡ್ಯ, ಮದ್ದೂರು ಹಾಗೂ ಚನ್ನಪಟ್ಟಣ ನಡುವೆ ಸಂಚರಿಸುವ ಪ್ರಯಾಣಿಕರ ಅಪೆ ಆಟೋದಲ್ಲಿ ಮಾಲೀಕರು ನಿಯಮ ಮೀರಿ ಪ್ರಯಾಣಿಕರನ್ನು ಕುರಿ ತುಂಬಿದಂತೆ ತುಂಬಿಕೊಂಡು ಹೋಗುತ್ತಿದ್ದರು ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮೃತರು ಮತ್ತು ಗಾಯಾಳುಗಳ ಪೋಷಕರು ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.