ಸಾರಾಂಶ
ಹಲಗೂರು : ಪ್ರಸಿದ್ಧ ಪ್ರೇಕ್ಷಣೀಯ ತಾಣ ಮುತ್ತತ್ತಿ ಬಳಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ವಾಸವಿರುವ ಮೂಲತಃ ಸಾಗ್ಯ ಗ್ರಾಮದ ತಿಮ್ಮರಾಜು ಪುತ್ರ ಎಸ್.ಟಿ.ಕಿರಣ್(21) ಮೃತಪಟ್ಟ ದುರ್ದೈವಿ. ಬೆಂಗಳೂರಿನ ಚಿನ್ನದ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಕಿರಣ್ ಶುಕ್ರವಾರ ಆರು ಮಂದಿ ಸ್ನೇಹಿತರ ಜೊತೆ ಕಾರಿನಲ್ಲಿ ಪ್ರವಾಸಕ್ಕೆ ಬಂದಿದ್ದರು.
ಹೊಸ ವರ್ಷಾದ ಸಂಭ್ರಮಾರಣೆಗೆ ಮುತ್ತತ್ತಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ತೆರವಿನ ನಂತರ ಬೆಂಗಳೂರಿನಿಂದ ಸ್ನೇಹಿತರೊಂದಿಗೆ ಆಗಮಿಸಿ ಮುತ್ತತ್ತಿರಾಯನ ದರ್ಶನ ಪಡೆದ ನಂತರ ಯುವಕರ ತಂಡ ನದಿಯಲ್ಲಿ ಈಜಲು ಇಳಿದಿತ್ತು. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಕಿರಣ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದು ಸ್ಥಳ ಪರಿಶೀಲಿಸಿದ ಪೊಲೀಸರು ಶನಿವಾರ ಬೆಳಗ್ಗೆ ಮೃತನ ಶವ ಹೊರ ತೆಗೆಸಿ ಮರಣೋತ್ತರ ಪರೀಕ್ಷೆಯ ನಂತರ ವಾರಸುದಾರರಿಗೆ ಶವ ಒಪ್ಪಿಸಲಾಯಿತು. ಹಲಗೂರು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಬಿ.ಮಹೇಂದ್ರ ಪ್ರಕರಣ ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಾಜಿ ಶಾಸಕಿ ಜಯವಾಣಿ ಮಂಚೇಗೌಡರ ಅಂತ್ಯಕ್ರಿಯೆ
ಮದ್ದೂರು: ಅನಾರೋಗ್ಯದಿಂದ ನಿಧನರಾದ ಮಾಜಿ ಶಾಸಕಿ ಜಯವಾಣಿ ಮಂಚೇಗೌಡ ಅವರ ಅಂತ್ಯಕ್ರಿಯೆ ಶನಿವಾರ ಪಟ್ಟಣದಲ್ಲಿ ಜರುಗಿತು. ಶುಕ್ರವಾರ ನಿಧನರಾಗಿದ್ದ ಜಯವಾಣಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಡಾ.ಸ್ಮಿತಾ ರಾಮು, ಗ್ರೇಡ್ 2 ತಹಸೀಲ್ದಾರ್ ಸೋಮಶೇಖರ್ ಅವರುಗಳು ಜಿಲ್ಲಾ ಮತ್ತು ತಾಲೂಕು ಆಡಳಿತದ ಪರವಾಗಿ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು.
ನಂತರ ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿಸಿ ತಮ್ಮಣ್ಣ, ವಿಧಾನ ಪರಿಷತ್ ಸದಸ್ಯ ಮಧು.ಜಿ ಮಾದೇಗೌಡ, ಮಾಜಿ ಶಾಸಕರಾದ ಕಲ್ಪನಾ ಸಿದ್ದರಾಜು, ಹೇಮಚಂದ್ರ ಸಾಗರ್, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ , ಎನ್.ಅಪ್ಪಾಜಿಗೌಡ, ಪುರಸಭಾ ಅಧ್ಯಕ್ಷ ಕೋಕಿಲ ಅರುಣ್, ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಸವರಾಜು, ಸಚಿನ್ ಚೆಲುವರಾಯಸ್ವಾಮಿ, ವಿನಯ್ ರಾಮಕೃಷ್ಣ, ಸೇರಿದಂತೆ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಾಜಿ ಶಾಸಕಿ ದಿ. ಜಯವಾಣಿ ಮಂಚೇಗೌಡ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಿದರು.