ಹಲಗೂರು:

ಪ್ರಸಿದ್ಧ ಪ್ರವಾಸಿಗರ ಪ್ರೇಕ್ಷಣೀಯ ಸ್ಥಳ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಲು ಹೋಗಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ. ಮೂಲತಃ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ಮುದ್ದೇಗೌಡನ ದೊಡ್ಡಿ ಗ್ರಾಮದ ಚಂದ್ರ ಅವರ ಪುತ್ರ ಅರುಣ್ ಕುಮಾರ್ ಮೃತ ಯುವಕ. ಈತ ವೃತ್ತಿಯಲ್ಲಿ ಕಾರಿನ ಚಾಲಕನಾಗಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು.

ಭಾನುವಾರ ರಜಾದಿನವನ್ನು ಕಳೆಯಲು ತನ್ನ 9 ಸ್ನೇಹಿತರ ಜೊತೆ ಮುತ್ತತ್ತಿರಾಯನ ದರ್ಶನ ಪಡೆಯಲು ಬಂದು ಪೂಜೆ ಸಲ್ಲಿಸಿದ ನಂತರ ಎಲ್ಲರೂ ಕಾವೇರಿ ನದಿಯಲ್ಲಿ ಈಜಲು ಹೋದಾಗ ಅರುಣ್ ಕುಮಾರ್ ನೀರಿನ ಸೆಳೆತ ದಿಂದ ಮೃತಪಟ್ಟಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ನದಿಯಿಂದ ಶವವನ್ನು ಹೊರ ತೆಗೆದ ನಂತರ ಮಳವಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಿ ಸೋಮವಾರ ಶವವನ್ನು ವಾರಸುದಾರರಿಗೆ ನೀಡಲಾಯಿತು. ಸಬ್ ಇನ್ಸ್ ಪೆಕ್ಟರ್ ಕೆ.ಎಸ್. ಲೋಕೇಶ್ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಸಾವು


ಹಲಗೂರು:

ಕಳೆದ ಜೂನ್ 19ರಂದು 2 ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಗಾಯಗೊಂಡಿದ್ದ ನಾರಾಯಣಗೌಡ (73) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತರಾದರು.

ಮೂಲತಃ ಕೊನ್ನಾಪುರ ಗ್ರಾಮದ ಲೇ.ಯಾಲಕ್ಕಿಗೌಡರ ಪುತ್ರ ನಾರಾಯಣಗೌಡ ಕಾರ್ಯನಿಮಿತವಾಗಿ ಮಳವಳ್ಳಿಗೆ ಹೋಗಿ ವಾಪಸ್ ಸ್ವಗ್ರಾಮಕ್ಕೆ ಬರುತ್ತಿದ್ದಾಗ ಮಳವಳ್ಳಿ ಕಡೆಯಿಂದ ಬಂದ ಬೈರ್ ನಾರಾಯಣಗೌಡರ ಬೈಕ್‌ಗೆ ತೊರೆ ಕಾಡನಹಳ್ಳಿ ಸಮೀಪದ ಕುಂಟನದೊಡ್ಡಿ ಗೇಟ್ ನ ಬಳಿ ಬೈಕಿಯಾಗಿ ತೀವ್ರ ಗಾಯಗೊಂಡ ಇವರನ್ನು ತಕ್ಷಣ ಮಳವಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಯಲ್ಲಿ ಸೇರಿಸಲಾಯಿತು.

ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತ ಪಟ್ಟಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಲೋಕೇಶ್ ಕೇಸು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಚಿನ್ನದ ಅಂಗಡಿಯಲ್ಲಿ 9 ಗ್ರಾಪಂ ತೂಕ ಚಿನ್ನ ವಂಚನೆ

ಮಳವಳ್ಳಿ: ಚಿನ್ನ ಖರೀದಿ ನೆಪದಲ್ಲಿ ನಕಲಿ ಚಿನ್ನದ ಬಳೆ ನೀಡಿ 9 ಗ್ರಾಂ ತೂಕದ ಅಸಲಿ ಚಿನ್ನ ಪಡೆದು ವಂಚಿಸಿರುವ ಘಟನೆ ಪಟ್ಟಣದ ಪೇಟೆ ಬೀದಿಯಲ್ಲಿ ಚಿನ್ನದಂಗಡಿಯಲ್ಲಿ ನಡೆದಿದೆ.ಪಟ್ಟಣದ ಪೇಟೆಬೀದಿ ಮದನ್ ಜ್ಯೂಯಲರ್‌ಗೆ ಶನಿವಾರ ಸಂಜೆ ಇಬ್ಬರು ಅಪರಿಚಿತ ಮಹಿಳೆಯರು ಬಂದು 916 ಆಲ್ ಮಾರ್ಕ್ ಇರುವ ಎರಡು ನಕಲಿ ಚಿನ್ನದ ಬಳೆಗಳನ್ನು ನೀಡಿ ಅದರ ಬದಲಿಗೆ ಎರಡು ಚಿನ್ನದ ಉಂಗುರ ಹಾಗೂ ಒಂದು ಚಿನ್ನದ ಓಲೆ ಸೇರಿದಂತೆ 9 ಗ್ರಾಂ ತೂಕದ ಚಿನ್ನವನ್ನು ಪಡೆದುಕೊಂಡು ಹೋಗಿದ್ದಾರೆ.

ನಂತರ ಮಹಿಳೆಯರು ನೀಡಿದ 916 ಆಲ್ ಮಾರ್ಕ್ ಚಿನ್ನದ ಬಳೆಗಳನ್ನು ಪರಿಕ್ಷೀಸಿದಾಗ ನಕಲಿ ಎನ್ನುವುದು ಗೊತ್ತಾಗಿ ಚಿನ್ನದಂಗಡಿಯ ಮಾಲೀಕ ಎಂ.ಮದನ್ ದಾಸ್ ನೀಡಿರುವ ದೂರಿನ ಮೇರೆಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.