ಆಕಸ್ಮಿಕ ಬೆಂಕಿ : ಚಲಿಸುತ್ತಿದ್ದ ಖಾಸಗಿ ಬಸ್ ಸುಟ್ಟು ಭಸ್ಮ, ಪ್ರಯಾಣಿಕರು ಪಾರು..!

| N/A | Published : Feb 10 2025, 01:48 AM IST / Updated: Feb 10 2025, 04:25 AM IST

ಸಾರಾಂಶ

ಚಲಿಸುತ್ತಿದ್ದ ಖಾಸಗಿ ಪ್ರವಾಸಿ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮಗೊಂಡಿರುವ ಘಟನೆ ತಾಲೂಕಿನ ಹೊಸಬೂದನೂರು ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.  

 ಮಂಡ್ಯ : ಚಲಿಸುತ್ತಿದ್ದ ಖಾಸಗಿ ಪ್ರವಾಸಿ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮಗೊಂಡಿರುವ ಘಟನೆ ತಾಲೂಕಿನ ಹೊಸಬೂದನೂರು ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಹೆದ್ದಾರಿ ಮಾರ್ಗವಾಗಿ ಕೇರಳದ ಕಣ್ಣೂರು ಕಡೆಗೆ ತೆರಳುತ್ತಿದ್ದ ಅಶೋಕ್ ಟ್ರಾವೆಲ್ಸ್ ಏಜೆನ್ಸಿಗೆ ಸೇರಿದ ಬಸ್ ಹೊಸಬೂದನೂರು ಬಳಿ ಬರುತ್ತಿದ್ದಂತೆ ರಸ್ತೆ ಮಧ್ಯದ ವಿಭಜಕಕ್ಕೆ ಟೈರ್ ತಗುಲಿ ಸಿಡಿದು ಬೆಂಕಿ ಹೊತ್ತಿಕೊಂಡಿದೆ. ತಡರಾತ್ರಿ ಬೆಂಕಿ ಕಾಣಿಸಿಕೊಂಡ ತಕ್ಷಣ ಬಸ್‌ನ್ನು ಚಾಲಕ ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಯಾಣಿಕರು ಬಸ್‌ನಿಂದ ಇಳಿಯುತ್ತಿರುವಾಗಲೇ ಬೆಂಕಿ ಕೆನ್ನಾಲಿಗೆ ಹೆಚ್ಚಾದ ಪರಿಣಾಮ ಕ್ಷಣಾರ್ಧದಲ್ಲಿ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಪ್ರಯಾಣಿಕರ ಬಟ್ಟೆ ಬರೆ, ಡೆಕೋರೇಷನ್ ವಸ್ತುಗಳು, ಬಸ್ಸಿನ ಬಿಡಿ ಭಾಗಗಳು ಸೇರಿದಂತೆ ಇತರೆ ವಸ್ತುಗಳು ಎಲ್ಲವೂ ಬೆಂಕಿಯಿಂದ ಸುಟ್ಟು ನಾಶವಾಗಿವೆ.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಅಷ್ಟರಲ್ಲಾಗಲೇ ಬಸ್ಸು ಬಹುತೇಕ ಸುಟ್ಟು ಕರಕಲಾಗಿತ್ತು. ಘಟನೆಯಿಂದ ಸುಮಾರು 30 ಲಕ್ಷ ರು.ಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ

ಮದ್ದೂರು: ತಾಲೂಕಿನ ನಿಡಘಟ್ಟ ಹಾಗೂ ರುದ್ರಾಕ್ಷಿಪುರ ಮಧ್ಯೆ ಬೆಂಗಳೂರು ಮೈಸೂರು ಹೆದ್ದಾರಿಯ ಕೆರೆ ಬಳಿ ಭಾನುವಾರ ಅಪರಿಚಿತ ಯುವಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸುಮಾರು 30 ರಿಂದ 35 ವರ್ಷ ವಯಸ್ಸಿನ ಯುವಕನ ತಲೆ ಮೇಲೆ ಗಾಯದ ಗುರುತು ಕಂಡು ಬಂದಿರುವ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಈತನನ್ನು ಬೇರೆಲ್ಲೂ ಕೊಲೆ ಮಾಡಿ ಶವವನ್ನು ಕೆರೆ ಬಳಿ ಬಿಸಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಶವದ ಮೈ ಮೇಲೆ ಮಹಾರಾಷ್ಟ್ರ ರಾಜ್ಯದ ಚಾಂದ್ಗಡ ಕ್ಷೇತ್ರದ ಚುನಾವಣಾ ಅಭ್ಯರ್ಥಿಯ ಚಿಹ್ನೆ ಇರುವ ಬಿಳಿ ಬಣ್ಣದ ಟಿ-ಶರ್ಟ್, ಗ್ರೇ ಕಲರ್‌ನ ಪ್ಯಾಂಟ್, ನೀಲಿ ಬಣ್ಣದ ಅಂಡರ್ವೇರ್ ಧರಿಸಿದ್ದಾನೆ. ಶವದ ಬಲಗೈನಲ್ಲಿ ಹೃದಯದ ಚಿಹ್ನೆಯುಳ್ಳ ಎಂ. ಆಕಾರದ ಹಸಿರು ಅಚ್ಚೆ ಇದೆ. ಈತನ ಬಗ್ಗೆ ವಾರಸು ದಾರರು ಇದ್ದಲ್ಲಿ ಮದ್ದೂರು ಪೊಲೀಸರು ಸಂಪರ್ಕಿಸುವಂತೆ ಕೋರಲಾಗಿದೆ.