ಸಾರಾಂಶ
ಬೆಂಗಳೂರು : ನಗರದ ಎರಡು ಎಟಿಎಂ ಕೆಂದ್ರಗಳಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯನಗರದ ರಾಗೀಗುಡ್ಡ ಕೊಳಗೇರಿ ನಿವಾಸಿ ಸೈಯದ್ ಜಮೀಲ್ (29) ಬಂಧಿತ. ಶುಕ್ರವಾರ ರಾತ್ರಿ 2 ಗಂಟೆಗೆ ಶಾಂತಿನಗರದ ಜೋಡಿ ರಸ್ತೆಯ ಕೆನರಾ ಬ್ಯಾಂಕ್ ಮತ್ತು ತಿಲಕನಗರದ ಎಟಿಎಂ ಕೇಂದ್ರದಲ್ಲಿ ಹಣ ಕಳ್ಳತನಕ್ಕೆ ಯತ್ನಿಸಿದ್ದ. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಸೈಯದ್ ಜಮೀಲ್ ಶಿವಾಜಿನಗರದ ಪಂಕ್ಚರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಮದ್ಯದ ಅಮಲಿನಲ್ಲಿ ಶಾಂತಿನಗರದ ಜೋಡಿ ರಸ್ತೆಯ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರಕ್ಕೆ ಹೋಗಿ ಎಟಿಎಂ ಕಾರ್ಡ್ ಹಾಕಿ ಹಣ ಡ್ರಾ ಮಾಡಲು ಪ್ರಯತ್ನಿಸಿದ್ದಾನೆ. ಹಣ ಬಾರದಿದ್ದಾಗ ಕೋಪಗೊಂಡು ಯಂತ್ರದಲ್ಲಿ ಹಣ ಡೆಪಾಸಿಟ್ ಮಾಡುವ ಜಾಗಕ್ಕೆ ಕೈ ಹಾಕಿ ಹಣ ಎಳೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಸೈರನ್ ಶಬ್ಧವಾದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದ.
ಬಳಿಕ ತಿಲಕನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ನುಗ್ಗಿ ಯಂತ್ರದಿಂದ ಹಣ ತೆಗೆಯಲು ಪ್ರಯತ್ನಿಸಿದ್ದಾನೆ. ಅಲ್ಲಿಯೂ ಸೈರನ್ ಶಬ್ಧವಾದ ಹಿನ್ನೆಲೆಯಲ್ಲಿ ಪರಾರಿಯಾಗಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.