ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಸೋಮವಾರ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಹಾಜರಾಗಿ ಜಾಮೀನು ಷರತ್ತುಗಳನ್ನು ಪೂರೈಸಿದರು.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಸೋಮವಾರ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಹಾಜರಾಗಿ ಜಾಮೀನು ಷರತ್ತುಗಳನ್ನು ಪೂರೈಸಿದರು.
ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್‌ಗೆ ಜಾಮೀನು ನೀಡಿ ಹೈಕೋರ್ಟ್ ಡಿ.13ರಂದು ಆದೇಶಿಸಿತ್ತು. ಅಲ್ಲದೆ, ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಈ ಷರತ್ತು ಪೂರೈಸಲು ಸೋಮವಾರ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಜೈ ಶಂಕರ್ ಅವರ ಮುಂದೆ ದರ್ಶನ್ ಹಾಜರಾಗಿದ್ದರು.
ಈ ವೇಳೆ ದರ್ಶನ್ ಪರ ವಕೀಲ ಎಸ್. ಸುನೀಲ್ ಕುಮಾರ್, ಹೈಕೋರ್ಟ್ ಆದೇಶದ ಪ್ರತಿಯನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು. ಜೊತೆಗೆ, ದರ್ಶನ್ ಅವರಿಗೆ ಸಹೋದರ ದಿನಕರ್ ತೂಗುದೀಪ, ಸ್ನೇಹಿತ ಧನ್ವೀರ್ ಭದ್ರತಾ ಖಾತರಿ (ಶ್ಯೂರಿಟಿ) ನೀಡುತ್ತಿರುವುದಾಗಿ ತಿಳಿಸಿ, ಆ ಕುರಿತ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಿದರು. ಈ ವೇಳೆ ಕೋರ್ಟ್‌ನಲ್ಲಿ ದಿನಕರ್ ಮತ್ತು ಧನ್ವೀರ್ ಹಾಜರಿದ್ದರು. ನಂತರ ಒಂದು ಲಕ್ಷ ರು. ಮೊತ್ತದ ವೈಯಕ್ತಿಕ ಬಾಂಡ್‌ಗೆ ದರ್ಶನ್ ಸಹಿ ಹಾಕಿದರು.
ಅದನ್ನು ದಾಖಲಿಸಿಕೊಂಡ ನ್ಯಾಯಾಧೀಶರು, ಜಾಮೀನು ಮಂಜೂರಾತಿ ಆದೇಶದ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರು.
ಇದೇ ವೇಳೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ದರ್ಶನ್ ಗೆಳತಿ ನಟಿ ಪವಿತ್ರಾ ಗೌಡ, ಮ್ಯಾನೇಜರ್ ಆರ್.ನಾಗರಾಜು, ಕಾರು ಚಾಲಕ ಎಂ.ಲಕ್ಷ್ಮಣ್ , ಗೆಳೆಯ ಪ್ರದೋಷ್ ರಾವ್ ಪರ ವಕೀಲರು ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಭದ್ರತಾ ಖಾತರಿ ಒದಗಿಸಿದರು. ಅದನ್ನು ದಾಖಲಿಸಿಕೊಂಡ ನ್ಯಾಯಾಲಯ ಈ ನಾಲ್ವರು ಆರೋಪಿಗಳನ್ನು ಜಾಮೀನು ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿ ಜೈಲಿನ ಅಧಿಕಾರಿಗಳಿಗೆ ಆದೇಶ ಪ್ರತಿ ರವಾನಿಸಲು ಸೂಚಿಸಿತು.
ಪ್ರದೋಷ್ ಮತ್ತು ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರೆ. ನಾಗರಾಜು ಕಲಬುರಗಿ ಕಾರಾಗೃಹ, ಎಂ.ಲಕ್ಷ್ಮಣ್ ಶಿವಮೊಗ್ಗ ಜೈಲಿನಲ್ಲಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಜೈಲಿನ ಅಧಿಕಾರಿಗಳಿಗೆ ಇ-ಮೇಲ್ ಮೂಲಕ ಆದೇಶ ಪ್ರತಿ ಕಳುಹಿಸಲಾಯಿತು.
ಇನ್ನು ಜಾಮೀನು ಪಡೆದಿರುವ ಅನು ಕುಮಾರ್ ಹಾಗೂ ಜಗದೀಶ್‌ಗೆ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಭದ್ರತಾ ಖಾತರಿದಾರರು ಸಿಗದಕ್ಕೆ ಜಾಮೀನು ಷರತ್ತು ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ. ಪ್ರಕರಣದಲ್ಲಿ ಸಹ ಆರೋಪಿಗಳಾಗಿರುವ ಪವನ್, ರಾಘವೇಂದ್ರ, ನಂದೀಶ್ ಮತ್ತು ಧನರಾಜ್ ಅವರ ಜಾಮೀನು ಅರ್ಜಿಗಳನ್ನು ವಿಚಾರಣೆಯನ್ನು ನ್ಯಾಯಾಲಯವು ಡಿ.18ಕ್ಕೆ ಮುಂದೂಡಿದೆ.
ಆಸ್ಪತ್ರೆಯಿಂದ ಕೋರ್ಟ್‌ಗೆ
ಜಾಮೀನು ಷರತ್ತು ಪೂರೈಸಲು ನಟ ದರ್ಶನ್ ನಗರದ ಬಿಜಿಎಸ್ ಆಸ್ಪತ್ರೆಯಿಂದ ಕೋರ್ಟ್‌ಗೆ ಬಂದಿದ್ದರು. ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಅವರು ನಡೆದಾಡಲು ಹಾಗೂ ನಿಲ್ಲಲು ಕಷ್ಟಪಡುತ್ತಿದ್ದರು. ನ್ಯಾಯಾಧೀಶರು ಬರುವ ಮುನ್ನವೇ ಕೋರ್ಟ್ ಹಾಲ್‌ಗೆ ವಕೀಲರು, ಕುಟುಂಬದ ಸದಸ್ಯರು, ಭದ್ರತಾ ಖಾತರಿದಾರರೊಂದಿಗೆ ಕೋರ್ಟ್ ಹಾಲ್‌ಗೆ ಕುಂಟುತ್ತಲೇ ಬಂದ ದರ್ಶನ್, ಅಲ್ಲಿದ್ದ ಬೆಂಚ್ ಮೇಲೆ ಕೂತರು. ನ್ಯಾಯಾಧೀಶರು ಆಗಮಿಸಿದ ನಂತರ ಎದ್ದು ಕಟಕಟೆಗೆ ಹೋದರು.
ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಈ ವೇಳೆ ನಿಲ್ಲಲು ಕಷ್ಟವಾಗುತ್ತಿದ್ದರಿಂದ ಎರಡು ಹೆಜ್ಜೆ ಹಿಂದೆ ಸರಿದು ಕಟಕಟೆಗೆ ಒರಗಿ ನಿಂತರು. ಷರತ್ತು ಪೂರೈಕೆ ಪ್ರಕ್ರಿಯೆ ಮುಗಿಸಿದ ಬಳಿಕ ಕೋರ್ಟ್‌ನಿಂದ ತನ್ನ ಕಾರಿನವರೆಗೆ ಕುಂಟುತ್ತಲೇ ನಡೆದು ಹೋದರು.
ಚಿಕಿತ್ಸೆ ಪಡೆಯುವುದು ಬಾಕಿಯಿರುವುದರಿಂದ ದರ್ಶನ್ ಜಾಮೀನು ಷರತ್ತು ಪೂರೈಸಿ ನೇರವಾಗಿ ಕೋರ್ಟ್‌ನಿಂದ ಬಿಜಿಎಸ್ ಆಸ್ಪತ್ರೆಗೆ ತೆರಳಿದರು. ಅವರು ಇನ್ನೂ ಮೂರು-ನಾಲ್ಕು ದಿನ ಫಿಸಿಯೋಥೆರಪಿ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಸಂಪೂರ್ಣವಾಗಿ ಗುಣಮುಖರಾದ ನಂತರವೇ ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಸ್‌ಪೋರ್ಟ್ ವಾಪಸ್‌ಗೆ ಆದೇಶ
ನ್ಯಾಯಾಂಗ ಬಂಧನಕ್ಕೆ ಒಳಗಾದ ವೇಳೆ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿರುವ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸುವಂತೆ ಕೋರಿ ದರ್ಶನ್ ಪರ ವಕೀಲರು ಇದೇ ವೇಳೆ ಮನವಿ ಸಲ್ಲಿಸಿದರು. ಆ ಮನವಿಗೆ ಒಪ್ಪಿದ ನ್ಯಾಯಾಲಯವು ದರ್ಶನ್‌ಗೆ ಪಾಸ್‌ಪೋರ್ಟ್ ಹಿಂದಿರುಗಿಸಲು ಆದೇಶಿಸಿತು.
ಹೈಕೊರ್ಟ್ ಆದೇಶದ ಮೇರೆಗೆ ಜಾಮೀನು ಮಂಜೂರು ಆದೇಶದ ಷರತ್ತುಗಳನ್ನು ಪೂರೈಸಲು ದರ್ಶನ್ ಸೋಮವಾರ ನಗರದ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿದ್ದರು. ವೈಯಕ್ತಿಕ ಬಾಂಡ್ ಹಾಗೂ ಇಬ್ಬರ ಭದ್ರತಾ ಖಾತರಿ ಒದಗಿಸಿದರು. ನಂತರ ಚಿಕಿತ್ಸೆ ಪಡೆಯಲು ನೇರವಾಗಿ ಆಸ್ಪತ್ರೆಗೆ ಹೋದರು.
- ಎಸ್. ಸುನೀಲ್ ಕುಮಾರ್, ದರ್ಶನ್ ಪರ ವಕೀಲರು