ದಂಡ ಪಾವತಿಸಿ 6 ಕೈದಿಗಳನ್ನು ಬಿಡುಗಡೆ ಮಾಡಿಸಿದ ನಟ ದುನಿಯಾ ವಿಜಯ್‌!

| Published : Jan 19 2024, 01:45 AM IST / Updated: Jan 19 2024, 12:41 PM IST

ಸಾರಾಂಶ

ತಮ್ಮ ಹುಟ್ಟುಹಬ್ಬದ ನಿಮಿತ್ತ ಕಾರಾಗೃಹದ ಕತ್ತಲ ಕೋಣೆಯಲ್ಲಿದ್ದ ಓರ್ವ ಮಹಿಳೆ ಸೇರಿ ಆರು ಮಂದಿ ಕೈದಿಗಳ ಪರವಾಗಿ ದಂಡ ಪಾವತಿಸಿ ಬಂಧ ಮುಕ್ತಗೊಳಿಸುವ ಮೂಲಕ ಚನಲಚಿತ್ರ ನಟ ದುನಿಯಾ ವಿಜಯ್ ಬೆಳಕಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತಮ್ಮ ಹುಟ್ಟುಹಬ್ಬದ ನಿಮಿತ್ತ ಕಾರಾಗೃಹದ ಕತ್ತಲ ಕೋಣೆಯಲ್ಲಿದ್ದ ಓರ್ವ ಮಹಿಳೆ ಸೇರಿ ಆರು ಮಂದಿ ಕೈದಿಗಳ ಪರವಾಗಿ ದಂಡ ಪಾವತಿಸಿ ಬಂಧ ಮುಕ್ತಗೊಳಿಸುವ ಮೂಲಕ ಚನಲಚಿತ್ರ ನಟ ದುನಿಯಾ ವಿಜಯ್ ಬೆಳಕಾಗಿದ್ದಾರೆ.

ಗುರುವಾರ ಬಿಡುಗಡೆಗೊಂಡ ಕೈದಿಗಳಾದ ಜಗನ್ನಾಥ್‌, ಹರೀಶ್‌ಗೌಡ, ಸುರೇಶ್‌, ಲೋಕೇಶ್‌, ಗೋವಿಂದರಾಜು ಹಾಗೂ ಗೌರಮ್ಮ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಪ್ರವೇಶ ದ್ವಾರದಲ್ಲೇ ನಿಂತು ವಿಜಯ್ ಸ್ವಾಗತಿಸಿದರು. 

ಜೈಲಿನಿಂದ ಹೊರಬರುತ್ತಲೇ ದುನಿಯಾ ವಿಜಯ್ ಅ‍ವರಿಗೆ ಕೈಮುಗಿದು ಕೈದಿಗಳು ಭಾವುಕರಾದರು. ಪ್ರತಿಯೊಬ್ಬರ ಜೀವನಗಾಥೆಯನ್ನು ಕೇಳಿದ ವಿಜಯ್ ಅವರು, ಒಳ್ಳೆಯ ದಿನಗಳು ನಿಮ್ಮದಾಗಲಿ. 

ಬಿಡುಗಡೆಗೊಂಡವರಿಗೆ ಮತ್ತೆ ತಪ್ಪು ಮಾಡದೆ ಸನ್ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳುವಂತೆ ಹಿತವಚನ ಹೇಳಿ ಅವರು ಬೀಳ್ಕೊಟ್ಟರು. ಕೊಲೆ, ಕೊಲೆ ಯತ್ನ ಹಾಗೂ ಅಪಹರಣ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಈ ಆರು ಮಂದಿ ಶಿಕ್ಷೆ ಗುರಿಯಾಗಿದ್ದರು. 

ಆದರೆ ಶಿಕ್ಷಾ ಅವಧಿ ಮುಗಿದ ಬಳಿಕ ದಂಡ ಪಾವತಿಸದ ಕಾರಣಕ್ಕೆ ಹೆಚ್ಚುವರಿಯಾಗಿ ಜೈಲಿನಲ್ಲೇ ಈ ಕೈದಿಗಳು ಶಿಕ್ಷೆ ಅನುಭವಿಸುತ್ತಿದ್ದರು. ಕೊನೆಗೆ ನಟ ವಿಜಯ್‌ ಅವರಿಂದ ಆ ಸೆರೆಹಕ್ಕಿಗಳು ‘ಹೊಸ ದುನಿಯಾ’ಗೆ ಕಂಡಿವೆ.

ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದ ಅಂಗವಾಗಿ ಕೈದಿಗಳಿಗೆ ವಿಜಯ್ ಆರ್ಥಿಕ ನೆರವು ನೀಡುವ ಸಾಮಾಜಿಕ ಕಾರ್ಯ ನೆರೆವೇರಿಸುತ್ತಾರೆ. ದಂಡ ಪಾವತಿಸಲು ಹಣವಿಲ್ಲದೆ ಜೈಲಿನಲ್ಲಿ ಶಿಕ್ಷೆ ಅನುಭವಿಸುವ ಕೈದಿಗಳ ಮಾಹಿತಿ ಪಡೆದು ಅವರು ಸಹಾಯ ಹಸ್ತ ಚಾಚುತ್ತಾರೆ. 

ಅದೇ ರೀತಿ ಈ ವರ್ಷ ಆರು ಕೈದಿಗಳ ಪರವಾಗಿ ₹2,64,500 ದಂಡವನ್ನು ವಿಜಯ್ ಪಾವತಿಸಿದರು. ಬಿಡುಗಡೆಯ ಪ್ರಕ್ರಿಯೆ ಪೂರ್ಣಗೊಳಿಸಿದ ಕಾರಾಗೃಹದ ಅಧಿಕಾರಿಗಳು, ಮಧ್ಯಾಹ್ನ ಆರು ಮಂದಿ ಕೈದಿಗಳನ್ನು ಬಂಧಮುಕ್ತಗೊಳಿಸಿದರು.