ಸಾರಾಂಶ
- ₹12 ಕೋಟಿ ಮೌಲ್ಯದ 15 ಕೇಜಿ ಚಿನ್ನ ಪತ್ತೆ
--- ಡಿಜಿಪಿ ರಾಮಚಂದ್ರರಾವ್ ಮಲ ಮಗಳು ರನ್ಯಾ
- ತಪಾಸಣೆಗೆ ಒಲ್ಲೆ ಎಂದು ಸಿಕ್ಕಿಬಿದ್ದ ರನ್ಯಾ ರಾವ್- ಬೆಂಗಳುರು ಏರ್‌ಪೋರ್ಟಲ್ಲಿ ‘ಮಾಣಿಕ್ಯ’ ನಟಿ ಸೆರೆ
--ಚಿನ್ನ ಸ್ಮಗ್ಲಿಂಗ್ ಮಾಡಿದ ನಟಿ ರನ್ಯಾ
ಕನ್ನಡಪ್ರಭ ವಾರ್ತೆ ಬೆಂಗಳೂರುವಿದೇಶದಿಂದ ಅಕ್ರಮವಾಗಿ ಕೋಟ್ಯಂತರ ಮೌಲ್ಯದ ಚಿನ್ನ ಸಾಗಾಣಿಕೆ ಮಾಡುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ರಾಜ್ಯ ಪೊಲೀಸ್ ಗೃಹ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಮಲಮಗಳು ಮತ್ತು ಚಲನಚಿತ್ರ ನಟಿ ರನ್ಯಾ ರಾವ್ ಅವರನ್ನು ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲೆಜೆನ್ಸಿ (ಡಿಆರ್‌ಇ) ಅಧಿಕಾರಿಗಳು ಬಂಧಿಸಿದ್ದಾರೆ.
ತಮ್ಮ ಪತಿ ಜಿತಿನ್ ಹುಕ್ಕೇರಿ ಜತೆ ದುಬೈನಿಂದ ಕೆಐಎಗೆ ಸೋಮವಾರ ರಾತ್ರಿ 7ರ ಸುಮಾರಿಗೆ ಬಂದಿಳಿದ ರನ್ಯಾ ಅವರನ್ನು ಡಿಆರ್‌ಇ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ತಪಾಸಣೆಗೆ ಒಳಪಡಿಸಿದಾಗ ಅವರು ಧರಿಸಿದ್ದ ಲೆದರ್ ಜಾಕೆಟ್‌ನಲ್ಲಿ ₹12 ಕೋಟಿ ಮೌಲ್ಯದ 14.8 ಕೇಜಿ ತೂಕದ ಚಿನ್ನದ ಬಿಸ್ಕೆಟ್ ಹಾಗೂ ಗಟ್ಟಿಗಳು ಪತ್ತೆಯಾಗಿವೆ.ಬಳಿಕ ತಮ್ಮ ಕಚೇರಿ ಕರೆದೊಯ್ದು ರನ್ಯಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು, ಮಂಗಳವಾರ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೊಪಿಸಿ ಆದೇಶಿಸಿದ ಮೇರೆಗೆ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ರನ್ಯಾ ಸೇರಿದ್ದಾರೆ.
‘ಮಾಣಿಕ್ಯ’ದ ನಟಿ ಈಗ ಗೋಲ್ಡ್ ಸ್ಮಗ್ಲರ್:ಆಂಧ್ರಪ್ರದೇಶ ಮೂಲದ ಡಿಜಿಪಿ ರಾಮಚಂದ್ರರಾವ್ ಅವರು, ಚಿಕ್ಕಮಗಳೂರು ಜಿಲ್ಲೆ ಕಾಫಿ ಪ್ಲಾಂಟರ್ ಮಾಲಕಿಯ ಜತೆ 2ನೇ ವಿವಾಹವಾಗಿದ್ದರು. ಐಪಿಎಸ್ ಅಧಿಕಾರಿ ಜತೆ ವಿವಾಹಕ್ಕೂ ಪೂರ್ವದ ದಾಂಪತ್ಯದಲ್ಲಿ ಅವರಿಗೆ ರನ್ಯಾ ಅಲಿಯಾಸ್ ಹರ್ಷವರ್ಧಿನಿ ಹಾಗೂ ರಿಷಬ್ ಹೆಸರಿನ ಮಕ್ಕಳಿದ್ದರು. ರಾವ್ ಜತೆ ವಿವಾಹವಾದ ಬಳಿಕ ತಾಯಿ ಜತೆ ಮಕ್ಕಳು ಇದ್ದರು.
ಇನ್ನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದು ಮುಗಿಸಿದ ನಂತರ ಚಲನಚಿತ್ರ ರಂಗದಲ್ಲಿ ನಟಿಯಾಗಿ ರಾವ್ ಅವರ ಮಲ ಮಗಳು ರನ್ಯಾ ಗುರುತಿಸಿಕೊಂಡಿದ್ದರು. ಖ್ಯಾತ ನಟ ಕಿಚ್ಚ ಸುದೀಪ್ ನಟನೆಯ ‘ಮಾಣಿಕ್ಯ’ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ರನ್ಯಾ ಪರಿಚಯವಾಗಿದ್ದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಪಟಾಕಿ’ ಚಿತ್ರದಲ್ಲೂ ನಾಯಕಿಯಾಗಿ ಮಿಂಚಿದ್ದರು. ಇದಾದ ಬಳಿಕ ಪರಭಾಷೆಯ ಕೆಲ ಸಿನಿಮಾಗಳಲ್ಲಿ ಅವರು ಬಣ್ಣಹಚ್ಚಿದರು. ಆದರೆ ಬಣ್ಣದ ಲೋಕದಲ್ಲಿ ನಿರೀಕ್ಷಿತ ಯಶಸ್ಸು ಕಾಣದೆ ಹೋದ ನಂತರ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಜಿತಿನ್ ಜತೆ ರನ್ಯಾ ವಿವಾಹವಾದರು. ಮದುವೆ ಬಳಿಕ ತನ್ನ ಪತಿ ಜತೆ ವಿಕ್ಟೋರಿಯಾ ಲೇಔಟ್‌ನಲ್ಲಿ ರನ್ಯಾ ನೆಲೆಸಿದ್ದರು ಎಂದು ಮೂಲಗಳು ವಿವರಿಸಿವೆ.ಆಫೀಸರ್‌ಗೆ ಆವಾಜ್ ಬಿಟ್ಟು ಸಿಕ್ಕಿದ್ರು:
ಈ ಬಂಧನಕ್ಕೂ ಎರಡು ವಾರಗಳ ಮುನ್ನ ಸಹ ದುಬೈಗೆ ರನ್ಯಾ ಹೋಗಿ ಬಂದಿದ್ದರು. ಆಗ ತಪಾಸಣೆ ವೇಳೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳ ಜತೆ ರನ್ಯಾ ಜಗಳ ಮಾಡಿಕೊಂಡಿದ್ದರು. ತಾನು ಡಿಜಿಪಿ ಪುತ್ರಿ ಎಂದು ಹೇಳಿಕೊಂಡು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗದೆ ಅವರು ಹೊರಗೆ ಬರುತ್ತಿದ್ದರು. ಅಲ್ಲದೆ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಆಕೆಯನ್ನು ಕರೆತರಲು ಪ್ರತಿ ಬಾರಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಹೋಗುತ್ತಿದ್ದರು. ಈ ಜಗಳವಾದ ಬಳಿಕ ರನ್ಯಾಳ ವಿದೇಶ ಯಾತ್ರೆ ಕುರಿತು ಡಿಆರ್‌ಐ ಅಧಿಕಾರಿಗಳು ಕೆದಕಿದಾಗ ಆಕೆ ಜೈಲು ಸೇರುವಂತಾಗಿದೆ.ಕಳೆದೊಂದು ವರ್ಷದಿಂದ ನಿರಂತರವಾಗಿ ದುಬೈ ಹಾಗೂ ಮಲೇಷ್ಯಾಕ್ಕೆ ರನ್ಯಾ ಪಯಣಿಸಿದ್ದರು. ಅದರಲ್ಲೂ ಹೆಚ್ಚಿನ ಬಾರಿ ದುಬೈಗೆ ಹೋಗಿ ಭೇಟಿ ನೀಡಿದ್ದ ಪ್ರಯಾಣ ಚರಿತ್ರೆ ಸಿಕ್ಕಿದೆ. ಈ ಮಾಹಿತಿ ಹಿನ್ನಲೆಯಲ್ಲಿ ದುಬೈನಲ್ಲಿ ರನ್ಯಾಳ ಸಂಪರ್ಕ ಜಾಲವನ್ನು ಜಾಲಾಡಿದಾಗ ಆ ದೇಶದಲ್ಲಿ ಅವರ ಯಾವುದೇ ಬ್ಯುಸಿನೆಸ್ ಅಥವಾ ರಕ್ತ ಸಂಬಂಧಿಕರಿಲ್ಲದ ಸಂಗತಿ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ರನ್ಯಾಳ ದುಬೈ ಯಾತ್ರೆ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಶಂಕೆ ಮೂಡಿದೆ. ಹೀಗಿರುವಾಗ ರನ್ಯಾ ಮತ್ತೆ ದುಬೈಗೆ ಹೊರಟಾಗ ಅಧಿಕಾರಿಗಳು ಜಾಗೃತರಾಗಿದ್ದರು. ಅಂತೆಯೇ ದುಬೈನಿಂದ ಸೋಮವಾರ ರಾತ್ರಿ 7ಕ್ಕೆ ತಮ್ಮ ಪತಿ ಜತೆ ಕೆಐಎಗೆ ಬಂದಿಳಿದ ಕೂಡಲೇ ರನ್ಯಾ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಆಗಲೂ ರನ್ಯಾ ಅವರನ್ನು ಸಹ ತಪಾಸಣೆ ಇಲ್ಲದೆ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್‌ಸ್ಟೇಬಲ್ ಬಸವರಾಜ್ ತೆರಳಿದ್ದರು. ರನ್ಯಾ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದಾಗ ಆಕ್ಷೇಪಿಸಿದ ಬಸವರಾಜು, ಅವರು ಯಾರೆಂದು ತಿಳಿದಿಕೊಂಡಿದ್ದೀರಿ. ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದಿದ್ದಾರೆ. ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಧರಿಸಿದ್ದ ಲೆದರ್ ಜಾಕೆಟ್‌ನಲ್ಲಿ ₹12 ಕೋಟಿ ಮೌಲ್ಯದ 14.8 ಕೇಜಿ ಚಿನ್ನ ಬಿಸ್ಕೆಟ್‌ಗಳು ಹಾಗೂ ಗಟ್ಟಿಗಳು ಪತ್ತೆಯಾಗಿವೆ. ನಂತರ ಎಚ್‌ಬಿಆರ್ ಲೇಔಟ್‌ನ ಕಚೇರಿಗೆ ಕರೆದೊಯ್ದು ರನ್ಯಾ ಹಾಗೂ ಅವರ ಪತಿ ಜಿತಿನ್ ಅವರನ್ನು ವಿಚಾರಣೆಗೆ ಒಳಪಡಿಸಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಚಿನ್ನ ಸಾಗಾಣಿಕೆ ಕೃತ್ಯದಲ್ಲಿ ರನ್ಯಾ ಪಾತ್ರ ಮಾತ್ರ ಕಂಡು ಬಂದ ಹಿನ್ನೆಲೆಯಲ್ಲಿ ಅವರ ಪತಿ ಜಿತಿನ್ ಅವರನ್ನು ಅಧಿಕಾರಿಗಳು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ರನ್ಯಾ ಸ್ವಾಗತಕ್ಕೆ ವಿಮಾನ ನಿಲ್ದಾಣಕ್ಕೆ ಹೋಗಿದ್ದ ಹೆಡ್ ಕಾನ್‌ಸ್ಟೇಬಲ್ ಬಸವರಾಜು ಅವರಿಂದ ಕೂಡ ಹೇಳಿಕೆ ಪಡೆದು ಅಧಿಕಾರಿಗಳು ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.40 ಬಾರಿ ದುಬೈ ಪ್ರವಾಸ?:ಕಳೆದೊಂದು ವರ್ಷದಿಂದ 30 ರಿಂದ 40 ಬಾರಿ ದುಬೈಗೆ ರನ್ಯಾ ಹೋಗಿ ಬಂದಿದ್ದರು. ಅಲ್ಲದೆ ಹದಿನೈದು ದಿನಗಳಿಗೊಮ್ಮೆ ಆಕೆಯ ದುಬೈ ಪ್ರಯಾಣವೇ ಡಿಆರ್‌ಐ ಅಧಿಕಾರಿಗಳ ಅನುಮಾನಕ್ಕೆ ಪ್ರಮುಖ ಕಾರಣವಾಗಿದೆ. ಪ್ರತಿ ಬಾರಿ ದುಬೈಗೆ ಪ್ರಯಾಣಿಸಿದಾಗ ಗೋಲ್ಡ್ ಸ್ಮಗ್ಲಿಂಗ್‌ನಲ್ಲಿ ಆಕೆ ಪಾತ್ರವಹಿಸಿರುವ ಶಂಕೆ ಇದೆ ಎಂದು ಮೂಲಗಳು ಹೇಳಿವೆ.ಮಲೇಷ್ಯಾ-ಬೆಂಗಳೂರು-ದುಬೈ?
ನಟಿ ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಕೃತ್ಯ ಹಿಂದೆ ಹಣದ ಹರಿವಿನ ಮೂಲವು ಬೆಂಗಳೂರು-ಮಲೇಷ್ಯಾ ಹಾಗೂ ದುಬೈ ನಡುವೆ ಸಂಪರ್ಕ ಹೊಂದಿದೆ ಎಂಬ ಮಾತುಗಳು ಕೇಳಿ ಬಂದಿವೆ.ಮಲೇಷ್ಯಾದಿಂದ ಕೆಲವು ನಿಷೇಧಿತ ವಸ್ತುಗಳು ಬೆಂಗಳೂರಿಗೆ ಅಕ್ರಮವಾಗಿ ಬಂದು ಬಿಕರಿಯಾಗಿವೆ. ಅವುಗಳಿಂದ ಸಂಪಾದಿಸಿದ ಹಣವು ಕ್ರಿಪ್ಟೋ ಕರೆನ್ಸಿ (ಬಿಟ್ ಕಾಯಿನ್) ವರ್ಗಾವಣೆಯಾಗಿ ಅದರ ಮೂಲಕ ದುಬೈನಲ್ಲಿ ಚಿನ್ನ ಖರೀದಿಯಾಗಿದೆ. ಈ ಚಿನ್ನದ ಸಾಗಾಣಿಕೆಯಲ್ಲಿ ರನ್ಯಾ ಪಾತ್ರವಹಿಸಿದ್ದಾರೆ ಎಂದು ಮೂಲಗಳು ಶಂಕೆ ವ್ಯಕ್ತಪಡಿಸಿವೆ.
ಇದೊಂದು ವ್ಯವಸ್ಥಿತ ಜಾಲವಾಗಿದೆ. ರನ್ಯಾ ಸಂಪರ್ಕದಲ್ಲಿದ್ದವರ ಶೋಧನೆ ಮುಂದುವರೆಸಿದರೆ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗುತ್ತವೆ. ಮಲೇಷ್ಯಾದಿಂದ ಬಂದ ‘ನಿಷೇಧಿತ ವಸ್ತು’ ಮಾರಾಟದಲ್ಲಿ ಪಾತ್ರವಹಿಸಿದ್ದವರು ಸಿಕ್ಕಿ ಬೀಳುತ್ತಾರೆ ಎಂದು ಮೂಲಗಳು ತಿಳಿಸಿವೆ.ಮತ್ತಷ್ಟು ಗಣ್ಯರ ಮಕ್ಕಳ ಪಾತ್ರ ಶಂಕೆ?ನಟಿ ರನ್ಯಾ ಬಳಿ ಪತ್ತೆಯಾದ ಬಂಗಾರ ಮೂಲದ ಶೋಧಿಸಿದರೆ ಮತ್ತಷ್ಟು ಗಣ್ಯರ ಮಕ್ಕಳು ಸಿಕ್ಕಿಬೀಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಲ್ಲಿ ರಾಜಕಾರಣಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಉದ್ಯಮಿಗಳ ಮಕ್ಕಳು ಸೇರಿದ್ದಾರೆ. ಇದು ಶ್ರೀಮಂತರ ಮಕ್ಕಳ ‘ಹೈಟೆಕ್’ ವ್ಯವಹಾರವಾಗಿದೆ ಎಂದು ಮೂಲಗಳು ಹೇಳಿವೆ.
---ರನ್ಯಾಗೆ ₹1.20 ಕೋಟಿ ಲಾಭ!ರನ್ಯಾ ರಾವ್ ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 14.8 ಕೆ.ಜಿ. ಚಿನ್ನ ಸಾಗಿಸಿದ್ದಾರೆ. ದುಬೈನಲ್ಲಿ 1 ಕೆ.ಜಿ. ಚಿನ್ನದ ದರ ₹81 ಲಕ್ಷ ಇದ್ದರೆ, ಬೆಂಗಳೂರಿನಲ್ಲಿ ₹89 ಲಕ್ಷ ಇದೆ. ಅಂದರೆ, ರನ್ಯಾ ರಾವ್‌ಗೆ ₹1.20 ಕೋಟಿ ಲಾಭವಾಗಿದೆ. ವಿದೇಶದಿಂದ ಚಿನ್ನ ಅಮದು ಮಾಡಿಕೊಳ್ಳಲು ಅವಕಾಶವಿದೆ. ಶೇ.6ರಷ್ಟು ತೆರಿಗೆ ಪಾವತಿಸಬೇಕು. ರನ್ಯಾ ರಾವ್ ಇಲ್ಲಿ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ.ಇಡಿ ತನಿಖೆಗೆ ಸಾಧ್ಯತೆರನ್ಯಾ ರಾವ್ ದುಬೈನಿಂದ ಸುಮಾರು ₹12 ಕೋಟಿ ಮೌಲ್ಯದ 14.8 ಕೆ.ಜಿ. ಚಿನ್ನ ಕಳ್ಳ ಸಾಗಣೆ ಮಾಡಿದ್ದಾರೆ. ಇಷ್ಟು ಪ್ರಮಾಣದ ಚಿನ್ನದ ಖರೀದಿಗೆ ಆಕೆಯ ಬಳಿ ಭಾರೀ ಪ್ರಮಾಣದ ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಎದುರಾಗಿದೆ. ಇದರ ಹಿಂದೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜಾರಿ ನಿರ್ದೇಶನಾಲಯ(ಇ.ಡಿ.)ವು ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಾಧ್ಯತೆಯಿದೆ.