38.39 ಕೋಟಿ ರು. ದುಬೈಗೆ ಸಾಗಿಸಿ 49.6 ಕೆ.ಜಿ.ಚಿನ್ನ ಖರೀದಿಸಿದ್ದ ನಟಿ ರನ್ಯಾ ರಾವ್‌

| N/A | Published : Apr 04 2025, 10:13 AM IST

Ranya Rao

ಸಾರಾಂಶ

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್‌ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 38.39 ಕೋಟಿ ರು. ಹಣವನ್ನು ಹವಾಲಾ ಮೂಲಕ ದುಬೈಗೆ ವರ್ಗಾಹಿಸಿ 49.6 ಕೆ.ಜಿ. ಚಿನ್ನ ಖರೀದಿಸಿದ್ದರು.

  ಬೆಂಗಳೂರು :  ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾ ರಾವ್‌ ಕಳೆದ ನಾಲ್ಕು ತಿಂಗಳಲ್ಲಿ ಸುಮಾರು 38.39 ಕೋಟಿ ರು. ಹಣವನ್ನು ಹವಾಲಾ ಮೂಲಕ ದುಬೈಗೆ ವರ್ಗಾಹಿಸಿ 49.6 ಕೆ.ಜಿ. ಚಿನ್ನ ಖರೀದಿಸಿದ್ದರು. ಅದನ್ನು ಕಳ್ಳ ಸಾಗಣೆ ಮೂಲಕ ನಗರಕ್ಕೆ ತಂದು ಮಾರಾಟ ಮಾಡಿದ್ದರು ಎಂದು ಆಕೆಯ ಸ್ನೇಹಿತ ಸಾಹಿಲ್‌ ಜೈನ್‌ ಕಂದಾಯ ಜಾರಿ ನಿರ್ದೇಶನಾಲಯ (ಡಿಆರ್‌ಐ)ದ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ತಾನು ದುಬೈಗೆ 38.39 ಕೋಟಿ ರು. ಹವಾಲಾ ಹಣ ವರ್ಗಾವಣೆಯಲ್ಲಿ ರನ್ಯಾಗೆ ಸಹಕರಿಸಿದ್ದೆ. ಅಲ್ಲದೆ, ಬೆಂಗಳೂರಿನಲ್ಲಿ 5 ಹಂತದಲ್ಲಿ ಆಕೆಗೆ 1.7 ಕೋಟಿ ರು. ಹವಾಲಾ ಮೂಲಕ ಹಣ ತಲುಪಿಸಿದ್ದಾಗಿ ಸಹ ವಿಚಾರಣೆ ವೇಳೆ ಸಾಹಿಲ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಈ ಕುರಿತ ಮಾಹಿತಿಯನ್ನು ಡಿಆರ್‌ಐ ಕೋರ್ಟ್‌ಗೆ ಮಾಹಿತಿ ಸಹ ನೀಡಿದೆ.

ಮಾ.3ರಂದು ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡುವಾಗ ಬೆಂಗಳೂರು ಏರ್ಪೋರ್ಟ್‌ನಲ್ಲಿ ರನ್ಯಾರನ್ನು ಡಿಆರ್‌ಐ ಬಂಧಿಸಿತ್ತು. ಈ ವೇಳೆ 12 ಕೋಟಿ ರು. ಮೌಲ್ಯದ 14.2 ಕೆ.ಜಿ. ಚಿನ್ನ ಜಪ್ತಿಯಾಗಿತ್ತು. ಬಳಿಕ ರನ್ಯಾ ವಾಟ್ಸ್‌ಆ್ಯಪ್‌ ಮಾಹಿತಿ ಕಲೆ ಹಾಕಿದಾಗ ಪ್ರಕರಣದಲ್ಲಿ ಸಾಹಿಲ್ ಪಾತ್ರ ಬಯಲಾಯಿತು.

ಮನೆಯಲ್ಲಿ ಸಿಕ್ಕಿದ್ದು ಚಿನ್ನ ಮಾರಾಟದ ಹಣ

ರನ್ಯಾ ಅವರ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದ್ದ 2.67 ಕೋಟಿ ರು. ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಸಂಪಾದಿಸಿದ್ದ ಲಾಭದ ಹಣ ಎಂದು ಡಿಆರ್‌ಐ ಹೇಳಿದೆ. ಪ್ರಕರಣದಲ್ಲಿ ರನ್ಯಾರವನ್ನು ಬಂಧಿಸಿದ ಬಳಿಕ ಅ‍ವರ ಫ್ಲ್ಯಾಟ್‌ ಮೇಲೆ ಡಿಆರ್‌ಐ ದಾಳಿ ನಡೆಸಿತ್ತು. ಈ ವೇಳೆ 2.67 ಕೋಟಿ ರು. ನಗದು ಹಾಗೂ 2.01 ಕೋಟಿ ರು. ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು.

ರನ್ಯಾ ಅವರಿಗೆ ಚಿನ್ನ ಖರೀದಿಗೆ ಹವಾಲಾ ಮೂಲಕ ಹಣ ವರ್ಗಾವಣೆ ಹಾಗೂ ಕಳ್ಳ ಸಾಗಣೆ ಮೂಲಕ ತಂದ ಚಿನ್ನದ ಮಾರಾಟದಲ್ಲಿ ಸಾಹಿಲ್ ನೆರವು ನೀಡಿದ್ದ ಸಂಗತಿ ತನಿಖೆಯಲ್ಲಿ ಗೊತ್ತಾಗಿತ್ತು. ಈ ಮಾಹಿತಿ ಮೇರೆಗೆ ಆತನನ್ನು ಡಿಆರ್‌ಐ ಬಂಧಿಸಿತ್ತು.

ಹೀಗಿದೆ ಹವಾಲಾ-ಚಿನ್ನ ವಹಿವಾಟು :  ನಾಲ್ಕು ತಿಂಗಳ ಅವಧಿಯಲ್ಲಿ ದುಬೈನಲ್ಲಿ ಹವಾಲಾ ಮೂಲಕ 38.39 ಕೋಟಿ ರು. ವರ್ಗಾಯಿಸಿ 49.6 ಕೆ.ಜಿ. ಚಿನ್ನವನ್ನು ಖರೀದಿಸಿ ತಂದು ರನ್ಯಾ ಮಾರಿದ್ದರು. ಭಾರತದಲ್ಲಿ ಇದರ ಮಾರುಕಟ್ಟೆ ಮೌಲ್ಯ 40.1 ಕೋಟಿ ರು. ಆಗಿದೆ ಎಂದು ಡಿಆರ್‌ಐ ಹೇಳಿದೆ.

2024ರ ನವೆಂಬರ್‌ನಲ್ಲಿ 6.5 ಕೋಟಿ ರು. ಹವಾಲಾ ಹಣ ದುಬೈಗೆ ವರ್ಗಾವಾಗಿ 8.981 ಕೆ.ಜಿ. ಚಿನ್ನವನ್ನು ರನ್ಯಾ ಖರೀದಿಸಿದ್ದಳು. ಅಲ್ಲದೆ, ಅದೇ ತಿಂಗಳು ಬೆಂಗಳೂರಿನಲ್ಲಿ 32.49 ಲಕ್ಷ ರು. ಹವಾಲಾ ಮೂಲಕ ರನ್ಯಾಗೆ ಬಂದಿತ್ತು. ನಂತರ ಡಿಸೆಂಬರ್‌ನಲ್ಲಿ ಹವಾಲಾ ಮೂಲಕ 9.64 ಕೋಟಿ ರು. ಪಡೆದು ದುಬೈನಲ್ಲಿ 12.612 ಕೆ.ಜಿ. ಚಿನ್ನವನ್ನು ರನ್ಯಾ ಖರೀದಿಸಿದ್ದರು. ಬಳಿಕ 30.34 ಲಕ್ಷ ರು. ಬೆಂಗಳೂರಿನಲ್ಲಿ ಹವಾಲಾ ಮೂಲಕ ಸಂದಾಯವಾಗಿತ್ತು.

2025ರ ಜನವರಿಯಲ್ಲಿ ದುಬೈಗೆ ಹವಾಲಾ ಮೂಲಕ 11 ಕೋಟಿ ರು. ವರ್ಗಾಯಿಸಿಕೊಂಡು 14.568 ಕೆ.ಜಿ. ಚಿನ್ನವನ್ನು ರನ್ಯಾ ಕೊಂಡಿದ್ದರು. ಇದೇ ವೇಳೆ ಬೆಂಗಳೂರಿನಲ್ಲಿ ಅವರಿಗೆ 55 ಲಕ್ಷ ರು. ಹವಾಲಾ ಮೂಲಕ ಸಂದಾಯವಾಗಿತ್ತು. ಫೆಬ್ರವರಿಯಲ್ಲಿ 11.25 ಕೋಟಿ ರು. ದುಬೈಗೆ ಹವಾಲಾ ಮೂಲಕ ಸಾಗಿಸಿ 13.433 ಕೆ.ಜಿ. ಚಿನ್ನ ಖರೀದಿಸಿದ್ದರು. ಬಳಿಕ ಅವರಿಗೆ ಬೆಂಗಳೂರಿನಲ್ಲಿ ಹವಾಲಾ ಮೂಲಕ 55.81 ಲಕ್ಷ ಸಂದಾಯವಾಗಿತ್ತು ಎಂದು ಡಿಆರ್‌ಐ ವಿವರಿಸಿದೆ.