ಸಾರಾಂಶ
ದುಬೈನಿಂದ ನಗರಕ್ಕೆ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರನ್ಯಾ ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.
ಬೆಂಗಳೂರು : ದುಬೈನಿಂದ ನಗರಕ್ಕೆ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ಜಾಮೀನು ಕೋರಿ ನಟಿ ರನ್ಯಾ ರಾವ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರಕ್ಕೆ ಮುಂದೂಡಿದೆ.
ರನ್ಯಾ ರಾವ್ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೋಮವಾರ ನಗರದ 64ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ವಿಚಾರಣೆ ನಡೆಸಿತು. ರನ್ಯಾ ಪರ ವಕೀಲರು ತಮ್ಮ ವಾದ ಮುಕ್ತಾಯಗೊಳಿಸಿದರು. ನಂತರ ಪ್ರಕರಣ ತನಿಖಾಧಿಕಾರಿಗಳಾದ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ ಪರ ವಕೀಲರು ವಾದ ಮಂಡಿಸಬೇಕಿತ್ತು. ಆದರೆ, ಕಾಲಾವಕಾಶದ ಕೊರತೆಯಿಂದ ಅರ್ಜಿ ವಿಚಾರಣೆಯನ್ನು ನ್ಯಾಯಾಧೀಶ ಐ.ಪಿ.ನಾಯಿಕ್ ಅವರು ಮಂಗಳವಾರಕ್ಕೆ ಮುಂದೂಡಿದರು.
ವಿಚಾರಣೆ ವೇಳೆ ರನ್ಯಾ ಪರ ವಕೀಲರು ವಾದ ಮಂಡಿಸಿ, ಪ್ರಕರಣದಲ್ಲಿ ಅರ್ಜಿದಾರರನ್ನು ಪರಿಶೀಲನೆ ನಡೆಸಿರುವ ಅಧಿಕಾರಿಗಳನ್ನೇ ಸಾಕ್ಷಿಗಳನ್ನಾಗಿ ಮಾಡಲಾಗಿದೆ. ಆರೋಪಿಯ ಅರೆಸ್ಟ್ ಮೆಮೊದಲ್ಲಿ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಬಂಧನ ಪ್ರಕ್ರಿಯೆಯಲ್ಲಿ ಸುಪ್ರಿಂ ಕೋರ್ಟ್ ನೀಡಿರುವ ಮಾರ್ಗಸೂಚಿ ಪಾಲಿಸಿಲ್ಲ. ಅಧಿಕಾರಿಗಳು ಸಹಜ ನ್ಯಾಯವನ್ನು ಉಲ್ಲಂಘಿಸಿದ್ದಾರೆ. ಸತ್ಯಾಂಶಗಳನ್ನು ಮುಚ್ಚಿಡುವ ಪ್ರಯತ್ನವನ್ನು ತನಿಖಾಧಿಕಾರಿಗಳು ನಡೆಸಿದ್ದಾರೆ ಎಂದು ಆಕ್ಷೇಪಿಸಿದರು.
ಅಲ್ಲದೆ, ಚಿನ್ನ ಜಪ್ತಿ ಮಾಡುವ ಹೆಸರಿನಲ್ಲಿ ರನ್ಯಾ ರಾವ್ ಅವರನ್ನು ಕಸ್ಟಡಿಯಲ್ಲಿ ಇಡಲಾಗಿತ್ತು. ಚಿನ್ನ ದೊರೆತಿದ್ದರಿಂದ ಕಸ್ಟಡಿಯಲ್ಲಿ ಇಡುವ ಅವಶ್ಯಕತೆಯೇ ಇರಲಿಲ್ಲ. ಇನ್ನೂ ಸಂಜೆ 6:30ಕ್ಕೆ ರನ್ಯಾ ರಾವ್ ವಶಕ್ಕೆ ಪಡೆದು, ರಾತ್ರಿ 1.30ರವರೆಗೂ ಮಹಜರು ಪ್ರಕ್ರಿಯೆ ನಡೆಸಲಾಗಿದೆ. ಇದು ಕಾನೂನು ಉಲ್ಲಂಘನೆ. ರನ್ಯಾ ರಾವ್ ಓರ್ವ ಮಹಿಳೆಯಾಗಿದ್ದು, ಬೆಂಗಳೂರಿನ ನಿವಾಸಿ. ಇದೊಂದು ಆರ್ಥಿಕ ಅಪರಾಧ. ಆರೋಪಿಯು ಯಾವುದೇ ಸಾಕ್ಷ್ಯ ನಾಶಪಡಿಸಲು ಸಾಧ್ಯವಿಲ್ಲ. ಆಕೆಯ ಪಾಸ್‌ಪೋರ್ಟ್ ಈಗಾಗಲೇ ಡಿಐಆರ್ ಅಧಿಕಾರಿಗಳು ಜಪ್ತಿ ಮಾಡಿರುವುದರಿಂದ ರನ್ಯಾ ದೇಶಬಿಟ್ಟು ತೆರಳುವ ಸಾಧ್ಯತೆ ಇಲ್ಲ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ತಮ್ಮ ವಾದ ಮುಕ್ತಾಯಗೊಳಿಸಿದರು.
ಅರ್ಜಿ ಕುರಿತು ಡಿಐಆರ್ ಪರ ವಕೀಲರು ಮಂಗಳವಾರ ತಮ್ಮ ವಾದ ಮಂಡಿಸಲಿದ್ಧಾರೆ.