ಸಾರಾಂಶ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶಿ ಮಹಿಳೆಯೊಬ್ಬಳನ್ನು ಬಂಧಿಸಿ ₹38.8 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದೆ.
ಬೆಂಗಳೂರು : ನಟಿ ರನ್ಯಾ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಬೆನ್ನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶಿ ಮಹಿಳೆಯೊಬ್ಬಳನ್ನು ಬಂಧಿಸಿ ₹38.8 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದೆ.
ಕತಾರ್ ದೇಶದಿಂದ ಕೆಐಎ ಬಂದಿಳಿದ ಘಾನಾ ದೇಶದ ಮಹಿಳೆ ಬಳಿ ಡ್ರಗ್ಸ್ ಪತ್ತೆಯಾಗಿದ್ದು, ಆಕೆಯನ್ನು ಬಂಧಿಸಿ ತಪಾಸಣೆಗೊಳಪಡಿಸಿದಾಗ ₹38.8 ಕೋಟಿ ಮೌಲ್ಯದ 3 ಕೆ.ಜಿ. ತೂಕದ ಕೊಕೇನ್ ಪತ್ತೆಯಾಗಿದೆ. ಈ ವಿದೇಶಿ ಪೂರ್ವಾಪರ ಕುರಿತು ಡಿಆರ್‌ಐ ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿದು ಬಂದಿದೆ.
ಎರಡು ವಾರಗಳ ಹಿಂದೆ ದುಬೈನಿಂದ ಚಿನ್ನ ಕಳ್ಳ ಸಾಗಿಸುವಾಗ ನಟಿ ಹಾಗೂ ಡಿಜಿಪಿ ಮಲಮಗಳು ರನ್ಯಾ ರಾವ್ ಅವರನ್ನು ಡಿಆರ್‌ಐ ಬಂಧಿಸಿದ್ದ ಪ್ರಕರಣ ರಾಷ್ಟ್ರವ್ಯಾಪ್ತಿ ಗಮನ ಸೆಳೆದಿತ್ತು. ಇನ್ನೊಂದೆಡೆ ವಿಮಾನದಲ್ಲಿ ಡ್ರಗ್ಸ್ ಸಾಗಿಸಿ ತಂದು ರಾಜ್ಯದಲ್ಲಿ ಮಾರುತ್ತಿದ್ದ ಇಬ್ಬರು ಆಫ್ರಿಕಾ ಮೂಲಕ ಮಹಿಳೆಯರನ್ನು ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ಸೆರೆ ಹಿಡಿದು ₹75 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಈ ಪ್ರಕರಣಗಳು ಮರೆಯುವ ಮುನ್ನವೇ ವಿಮಾನದಲ್ಲಿ ರಾಜ್ಯಕ್ಕೆ ಡ್ರಗ್ಸ್ ಅಕ್ರಮವಾಗಿ ತರುತ್ತಿದ್ದ ಮತ್ತೊಬ್ಬ ವಿದೇಶಿ ಮಹಿಳೆಯನ್ನು ಡಿಆರ್‌ಐ ಬಂಧಿಸಿದೆ. ಅಲ್ಲದೆ ಆಕೆಯ ಬಳಿ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ಸಹ ಸಿಕ್ಕಿದ್ದು, ಈ ಡ್ರಗ್ಸ್ ಪೂರೈಕೆ ಜಾಲದ ಕುರಿತು ಡಿಆರ್‌ಐ ಜಾಲಾಡುತ್ತಿದೆ ಎಂದು ತಿಳಿದು ಬಂದಿದೆ.