ಸಾರಾಂಶ
ತಾಯಿಯ ಕೊಲೆಯೊಂದಿಗೆ ಅಂತ್ಯಗೊಂಡಿದ್ದ ಅಮ್ಮ-ಮಗಳ ಜಗಳ ವರ್ಷದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಗಂಡನ ಜೊತೆ ಸೇರಿ ಮಗಳು ತನ್ನ ತಾಯಿಯ ಶವವನ್ನು ಹೂತಿಟ್ಟ ರಹಸ್ಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಡ್ಯ
ತಾಯಿಯ ಕೊಲೆಯೊಂದಿಗೆ ಅಂತ್ಯಗೊಂಡಿದ್ದ ಅಮ್ಮ-ಮಗಳ ಜಗಳ ವರ್ಷದ ಬಳಿಕ ತಡವಾಗಿ ಬೆಳಕಿಗೆ ಬಂದಿದೆ. ಗಂಡನ ಜೊತೆ ಸೇರಿ ಮಗಳು ತನ್ನ ತಾಯಿಯ ಶವವನ್ನು ಹೂತಿಟ್ಟ ರಹಸ್ಯವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಆದರೆ, ಹೂತಿಟ್ಟ ಜಾಗದಲ್ಲಿ ಶವಕ್ಕಾಗಿ ಶೋಧ ನಡೆಸಿದಾಗ ಮೃತದೇಹ ಸಿಗದಿರುವುದು ಕುತೂಹಲಕ್ಕೂ ಕಾರಣವಾಗಿದೆ.
ತಾಲೂಕಿನ ಹೆಬ್ಬಕವಾಡಿ ಗ್ರಾಮದ ಶಾರದಮ್ಮ (೫೦) ಕೊಲೆಯಾದ ಮಹಿಳೆ. ಶಾರದಮ್ಮನ ಮಗಳು ಅನುಷಾ ಮತ್ತು ಅಳಿಯ ದೇವರಾಜ್ ಕೊಲೆ ಆರೋಪಿಗಳೆಂದು ಹೇಳಲಾಗಿದೆ. ಶಾರದಮ್ಮನ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ.
ನಡೆದಿದ್ದೇನು?
ಮಂಡ್ಯ ತಾಲೂಕು ಹೆಬ್ಬಕವಾಡಿ ಗ್ರಾಮದ ಅನುಷಾಳನ್ನು ಮೈಸೂರಿನ ಹಾರೋಹಳ್ಳಿ ನಿವಾಸಿ ದೇವರಾಜ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಒಬ್ಬಳೇ ಮಗಳಾಗಿದ್ದರಿಂದ ಶಾರದಮ್ಮ ಆಗಾಗ ಹಾರೋಹಳ್ಳಿಯಲ್ಲಿರುವ ಮಗಳ ಮನೆಗೆ ಹೋಗಿಬರುತ್ತಿದ್ದರು. ಅದೇ ರೀತಿ ೨೦೨೨ರ ನವೆಂಬರ್‌ನಲ್ಲಿ ಮಗಳ ಮನೆಗೆ ಶಾರದಮ್ಮ ತೆರಳಿದ್ದ ವೇಳೆ ಅಮ್ಮ-ಮಗಳ ನಡುವೆ ಯಾವುದೋ ವಿಚಾರಕ್ಕೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ ಶಾರದಮ್ಮ ಆಕಸ್ಮಿಕವಾಗಿ ಮನೆಯಲ್ಲಿ ಬಿದ್ದಾಗ ತಲೆಗೆ ತೀವ್ರ ಪೆಟ್ಟಾಗಿ ಸಾವನ್ನಪ್ಪಿದ್ದರು ಎಂದು ಹೇಳಲಾಗಿದೆ.
ಶಾರದಮ್ಮ ಕಾಣದಿದ್ದಾಗ ಸಂಬಂಧಿಕರು ಮಗಳ-ಅಳಿಯನನ್ನು ವಿಚಾರಿಸಿದಾಗ, ಶಾರದಮ್ಮ ಯಾರ ಜೊತೆಯೋ ಓಡಿಹೋಗಿದ್ದಾಳೆ. ಆಕೆಯ ಬಗ್ಗೆ ನಮಗೆ ವಿಷಯವೇ ತಿಳಿದಿಲ್ಲ ಎಂದು ಹೇಳುತ್ತಲೇ ಕಾಲ ನೂಕುತ್ತಿದ್ದರು. ತಾಯಿಯನ್ನು ಹುಡುಕುವ ಪ್ರಯತ್ನದಲ್ಲಿ ಗಂಡ-ಹೆಂಡತಿ ಇಬ್ಬರೂ ಗಂಭೀರವಾಗಿ ತೊಡಗಿರಲಿಲ್ಲ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಸಂಬಂಧಿಕರ ಒತ್ತಡಕ್ಕೆ ಮಣಿದ ಪುತ್ರಿ ಅನುಷಾ, ತಾಯಿ ಕೊಲೆಯಾದ ಏಳು ತಿಂಗಳ ಬಳಿಕ ೨೦೨೩ರ ಜೂನ್ ೨೨ ರಂದು ಮೈಸೂರಿನ ವರುಣಾ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಪೊಲೀಸರು ಎಲ್ಲೆಡೆ ಹುಡುಕಾಟ ನಡೆಸಿ, ಸಂಬಂಧಿಕರನ್ನೆಲ್ಲಾ ವಿಚಾರಿಸಿದರೂ ಶಾರದಮ್ಮನ ಸುಳಿವು ಪತ್ತೆಯಾಗಲೇ ಇಲ್ಲ. ಶಾರದಮ್ಮ ಆರು ತಿಂಗಳಿಂದ ಕಾಣಿಸದಿದ್ದರೂ ಮಗಳು ಪೊಲೀಸರಿಗೆ ದೂರು ನೀಡಿಲ್ಲದಿರುವುದು ಕಂಡುಬಂದಾಗ ಪೊಲೀಸರಿಗೆ ಮಗಳು-ಅಳಿಯನ ಮೇಲೆ ಅನುಮಾನ ಹೆಚ್ಚಾಯಿತು.
ಗಂಡ ದೇವರಾಜ್ ಮತ್ತು ಪುತ್ರಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ದಂಪತಿ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಕೊಲೆ ರಹಸ್ಯ ಬಯಲಾದ ನಂತರ ಮೈಸೂರಿನ ವರುಣಾ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಮಂಡ್ಯ ಗ್ರಾಮಾಂತರ ಪೊಲೀಸರಿಗೆ ಪ್ರಕರಣವನ್ನು ವರ್ಗಾವಣೆ ಮಾಡಿದರು.
ನಂತರ ಪೊಲೀಸರು ದಂಪತಿಯನ್ನು ಶವವನ್ನು ಹೂತಿಟ್ಟ ಜಾಗ ತೋರಿಸುವಂತೆ ಹೆಬ್ಬಕವಾಡಿ ಗ್ರಾಮಕ್ಕೆ ಕರೆತಂದರು. ಶವದ ಮರಣೋತ್ತರ ಪರೀಕ್ಷೆ ನಡೆಸಲು ಮೃತದೇಹವನ್ನು ಹೊರತೆಗೆಯಲು ಮುಂದಾಗಿದ್ದರು. ಆರೋಪಿಗಳು ತೋರಿಸಿರುವ ಜಾಗದಲ್ಲಿ ಗುಂಡಿ ತೆಗೆದರೂ ಶವದ ಕುರುಹುಗಳು ಪತ್ತೆಯಾಗಿಲ್ಲ.
ಮಂಡ್ಯ ತಹಸೀಲ್ದಾರ್ ಶಿವಕುಮಾರ್ ಬಿರಾದರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶನಿವಾರ ರಾತ್ರಿಯವರೆಗೆ ಮೃತದೇಹದ ಶೋಧಕ್ಕೆ ಕಾರ್ಯಾಚರಣೆ ನಡೆಸಿದರೂ ಶವ ದೊರಕದ ಹಿನ್ನೆಲೆಯಲ್ಲಿ ಭಾನುವಾರವೂ ಕಾರ್ಯಾಚರಣೆ ಮುಂದುವರೆಸಿದ್ದರು. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಣ್ಣು ಆಪರೇಷನ್ ಮಾಡಿಸುವುದಾಗಿ ಶಾರದಮ್ಮನನ್ನು ಹಾರೋಹಳ್ಳಿಗೆ ಕರೆದುಕೊಂಡು ಹೋಗಿದ್ದರು. ಆನಂತರದಲ್ಲಿ ಶಾರದಮ್ಮ ಊರಿಗೂ ಬಂದಿರಲಿಲ್ಲ. ಮಗಳನ್ನು ಕೇಳಿದರೆ ಯಾರ ಜೊತೆಯೋ ಓಡಿಹೋಗಿದ್ದಾಳೆ. ನಮ್ಮ ಮನೆಯಲ್ಲಂತೂ ಇಲ್ಲ ಎಂದು ಹೇಳುತ್ತಿದ್ದರು. ಆನಂತರದಲ್ಲಿ ಅವರೇ ದೂರು ಕೊಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶಾರದಮ್ಮನನ್ನು ತಾವೇ ಕೊಲೆ ಮಾಡಿರುವುದಾಗಿ ಪೊಲೀಸರೆದುರು ಒಪ್ಪಿಕೊಂಡಿದ್ದಾರೆ ಎಂದು ಶಾರದಮ್ಮನ ಸಂಬಂಧಿಕರು ತಿಳಿಸಿದ್ದಾರೆ.
ಭಾರೀ ಜನಸ್ತೋಮ:
ಶಾರದಮ್ಮನ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿ ಭಾರೀ ಜನಸ್ತೋಮ ನೆರೆದಿದೆ. ಎಲ್ಲರೂ ಕುತೂಹಲದಿಂದ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯನ್ನು ಎದುರುನೋಡುತ್ತಿದ್ದಾರೆ. ಸ್ಥಳದಲ್ಲಿ ಆ್ಯಂಬುಲೆನ್ಸ್, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಹಾಜರಿದ್ದರು.