ಅಗ್ನಿ ಅವಘಡ: ಆಲೆ ಮನೆ, ಕಬ್ಬಿನ ಸಿಪ್ಪೆ ಮೆದೆಗೆ ಬೆಂಕಿ

| Published : Feb 07 2024, 01:50 AM IST

ಅಗ್ನಿ ಅವಘಡ: ಆಲೆ ಮನೆ, ಕಬ್ಬಿನ ಸಿಪ್ಪೆ ಮೆದೆಗೆ ಬೆಂಕಿ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಕಡೆ ಅಗ್ನಿ ಅವಘಡದಿಂದಾಗಿ ಆಲೆಮನೆ ಹಾಗೂ ಕಬ್ಬಿನ ಸಿಪ್ಪೆಯ ಮೆದೆಗಳು ಸುಟ್ಟು ಹೋಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ವಳಗೆರೆ ಮೆಣಸ ಗ್ರಾಮದಲ್ಲಿ ನಡೆದಿದೆ. ಇನ್ನೊಂದು ಹಲಗೂರು ಹೋಬಳಿಯ ಸಾಗ್ಯ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ವಿವಿಧ ತಳಿಯ ಮರಗಳು ಆಹುತಿಯಾಗಿದೆ. ಇದರಿಂದ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ವರದಿಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಗ್ನಿ ಅವಘಡದಿಂದಾಗಿ ಆಲೆಮನೆ ಹಾಗೂ ಕಬ್ಬಿನ ಸಿಪ್ಪೆಯ ಮೆದೆಗಳು ಸುಟ್ಟು ಹೋಗಿರುವ ಘಟನೆ ತಾಲೂಕಿನ ವಳಗೆರೆ ಮೆಣಸ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕಾಳೇಗೌಡ ಲೇ.ದೇವೇಗೌಡರಿಗೆ ಸೇರಿದ ಆಲೆಮನೆಗೆ ಮಧ್ಯಾಹ್ನ ಬೆಂಕಿ ಬಿದ್ದಿದೆ. ಒಂದು ಎಕರೆ ಹೊಲದಲ್ಲಿ ನಿರ್ಮಿಸಿರುವ ಸುಮಾರು 20 ವರ್ಷಗಳಷ್ಟು ಹಳೆಯದಾದ ಚಾಲ್ತಿಯಲ್ಲಿರುವ ಆಲೆಮನೆಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಬೆಂಕಿ ಕೆನ್ನಾಲಿಗೆಯು ಅಲೆಮನೆ ಮುಂದೆ ಹಾಕಲಾಗಿದ್ದ ಮೂರು ಕಬ್ಬಿನ ಸಿಪ್ಪೆಯ ಮೆದೆಗಳನ್ನು ಸಂಪೂರ್ಣ ಭಸ್ಮವಾಗಿವೆ.

ಸುದ್ದಿ ತಿಳಿದ ತಕ್ಷಣ ಅಗ್ನಿ ಅನಾಹುತದ ಸ್ಥಳಕ್ಕೆ ಠಾಣಾಧಿಕಾರಿ ಶಿವಣ್ಣ ನೇತೃತ್ವದ ಅಗ್ನಿ ಶಾಮಕ ತಂಡ ತೆರಳಿ ಸತತ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ. ಅಕ್ಕಪಕ್ಕದಲ್ಲಿ ಇದ್ದಂತ ಆಲೆಮನೆ, ತೆಂಗಿನ ಮರಗಳಿಗೆ ಬೆಂಕಿತಾಗದಂತೆ ಎಚ್ಚರವಹಿಸಿ ಸಂಪೂರ್ಣವಾಗಿ ಬೆಂಕಿ ನಂದಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ದಿನೇಶ್, ಶ್ರೀಕಾಂತ ಉಪಾಯಣ್ಣವರ್, ಸಂತೋಷ್ ಕುಮಾರ್, ಶ್ರೀಧರ್‌ಅವಟಿ ಮುಂತಾದವರು ಭಾಗವಹಿಸಿದ್ದರು.

ಆಕಸ್ಮಿಕ ಬೆಂಕಿ ತಗುಲಿ ಮರಗಳು ಆಹುತಿ, ಅಪಾರ ನಷ್ಟಹಲಗೂರು: ಆಕಸ್ಮಿಕ ಬೆಂಕಿ ತಗುಲಿ ವಿವಿಧ ತಳಿಯ ಮರಗಳು ಆಹುತಿಯಾಗಿ ಲಕ್ಷಾಂತರ ರು. ನಷ್ಟವಾಗಿರುವ ಘಟನೆ ಸೋಮವಾರ ಮಧ್ಯಾಹ್ನ ಸಮೀಪದ ಸಾಗ್ಯ ಗ್ರಾಮದಲ್ಲಿ ನಡೆದಿದೆ.ಸಾಗ್ಯ ಗ್ರಾಮದ ರೈತ ರಾಜಣ್ಣ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ಮಹಾಘನಿ, ಮಾವು ಸೇರಿದಂತೆ ವಿವಿಧ ಜಾತಿ ಮರಗಳನ್ನು ಬೆಳೆಸಿದ್ದರು. ಸೋಮವಾರ ಮಧ್ಯಾಹ್ನ ತೆಂಗಿನ ಮರಕ್ಕೆ ವಿದ್ಯುತ್ ಸ್ಪರ್ಶ ಆಗಿದೆ.ಇದರಿಂದ ಬೆಂಕಿ ಕಾಣಿಸಿಕೊಂಡು ಇಡೀ ತೋಟಕ್ಕೆ ಆವರಿಸಿಕೊಂಡಿದೆ. ತೋಟದಲ್ಲಿ ನೀರು ಹಾಯಿಸಲು ಅಳವಡಿಸಿದ್ದ ಹನಿ ನೀರಾವರಿ ಪೈಪುಗಳು ಸುಟ್ಟು ಹೋಗಿವೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಭೇಟಿ ನೀಡ, ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ರಾಜಣ್ಣ ಆಗ್ರಹಿಸಿದರು.ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯ ಎಎಸ್ ಐ ಶಿವಣ್ಣ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.