ವಿಮಾನದಲ್ಲಿ ಫಜೀತಿ: 1 ಗಂಟೆ ಟಾಯ್ಲೆಟ್‌ನಲ್ಲೇ ಸಿಲುಕಿ ತನ್ನ ಪ್ರಯಾಣ ಮುಗಿಸಿದ ಬೆಂಗಳೂರಿಗ!

| Published : Jan 18 2024, 02:03 AM IST / Updated: Jan 18 2024, 01:08 PM IST

Flight
ವಿಮಾನದಲ್ಲಿ ಫಜೀತಿ: 1 ಗಂಟೆ ಟಾಯ್ಲೆಟ್‌ನಲ್ಲೇ ಸಿಲುಕಿ ತನ್ನ ಪ್ರಯಾಣ ಮುಗಿಸಿದ ಬೆಂಗಳೂರಿಗ!
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್‌ ಜೆಟ್‌ ವಿಮಾನದ ಶೌಚಾಲಯದ ಬಾಗಿಲು ಬಂದ್‌ ಆಗಿದ್ದರಿಂದ 1 ತಾಸು ಬೆಂಗಳೂರಿನ ವ್ಯಕ್ತಿ ಸಿಲುಕಿದ ಘಟನೆ ನಡೆದಿದೆ.

 

 

ನವದೆಹಲಿ: ವಿಮಾನದಲ್ಲಿ ಶೌಚಾಲಯಕ್ಕೆ ತೆರಳಿದ ವೇಳೆ ಶೌಚಾಲಯದ ಬಾಗಿಲು ಲಾಕ್‌ ಆಗಿ ಪ್ರಯಾಣಿಕರೊಬ್ಬರು 1 ಗಂಟೆ ಕಾಲ ಶೌಚಾಲಯದಲ್ಲೇ ಇದ್ದು ತಮ್ಮ ಪ್ರಯಾಣ ಮುಗಿಸಿದ ದುರದೃಷ್ಟಕರ ಘಟನೆಯೊಂದು ಮುಂಬೈನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ವಿಮಾನದಲ್ಲಿ ನಡೆದಿದೆ.

ಮಂಗಳವಾರ ಬೆಂಗಳೂರಿಗೆ ಬರುತ್ತಿದ್ದ ಸ್ಪೈಸ್‌ಜೆಟ್‌ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯಕ್ಕೆಂದು ತೆರಳಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಶೌಚಾಲಯದ ಬಾಗಿಲು ಹೊರಗಿನಿಂದ ಲಾಕ್‌ ಆಗಿಬಿಟ್ಟಿದೆ. ಬಹುಶಃ ಶೌಚಾಲಯದಲ್ಲಿ ಯಾರೂ ಇಲ್ಲವೆಂದು ಭಾವಿಸಿ ವಿಮಾನ ಸಿಬ್ಬಂದಿಯೋ ಅಥವಾ ಇತರ ಪ್ರಯಾಣಿಕರೋ ಬಾಗಿಲನ್ನು ಹೊರಗಿಂದ ಲಾಕ್‌ ಮಾಡಿದ್ದಾರೆ. ಆಗ ಈ ಅಚಾತುರ್ಯ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಶೌಚಾಲಯ ಲಾಕ್‌ ಆದ ಹಿನ್ನೆಲೆಯಲ್ಲಿ ವಿಮಾನ ಬೆಂಗಳೂರಿಗೆ ಬರುವವರೆಗೂ ಆ ಪ್ರಯಾಣಿಕ ಶೌಚಾಲಯದಲ್ಲೇ 1 ಗಂಟೆಗಳ ಕಾಲ ಪ್ರಯಾಣಿಸಿದ್ದಾರೆ. ಶೌಚಾಲಯದಲ್ಲಿ ಸಿಲುಕಿರುವಾಗ ವಿಮಾನ ಸಿಬ್ಬಂದಿಯು, ‘ಗಾಬರಿ ಆಗಬೇಡಿ. ಶೀಘ್ರ ಬಾಗಿಲ ಲಾಕ್ ಓಪನ್‌ ಮಾಡಿ ನಿಮ್ಮನ್ನು ಹೊರತರಲಾಗುವುದು’ ಎಂದು ಬಿಳಿ ಕಾಗದದಲ್ಲಿ ಬರೆದು ಬಾಗಿಲ ಸಂದಿ ಮೂಲಕ ಪ್ರಯಾಣಿಕನಿಗೆ ಕಳಿಸಿದ್ದರು.

ವಿಮಾನ ಬೆಂಗಳೂರಿನಲ್ಲಿ ಇಳಿದ ಕೂಡಲೇ ಎಂಜಿನಿಯರ್‌ ಶೌಚಾಲಯದ ಬಾಗಿಲು ತೆರೆದ ಬಳಿಕವಷ್ಟೇ ಪ್ರಯಾಣಿಕ ಹೊರಬಂದಿದ್ದಾನೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

ಘಟನೆ ಬಳಿಕ ಶೌಚಾಲಯದಲ್ಲಿ ಸಿಲುಕಿದ ಪ್ರಯಾಣಿಕನ ಬಳಿ ಕ್ಷಮೆಯಾಚಿಸಲಾಗಿದ್ದು, ಆತನ ಟಿಕೆಟ್‌ ಹಣವನ್ನು ಮರುಪಾವತಿ ಮಾಡಲಾಗುವುದು ಎಂದು ಸ್ಪೈಸ್‌ಜೆಟ್‌ ಸಂಸ್ಥೆ ತಿಳಿಸಿದೆ.