ಹಣ ಮತ್ತು ಚಿನ್ನಾಭರಣ ವಂಚನೆ ಪ್ರಕರಣ : ಸೈಬರ್ ಕ್ರೈಂ ಪೊಲೀಸರೆದುರು ವಿಚಾರಣೆಗೆ ಹಾಜರಾದ ಐಶ್ವರ್ಯಗೌಡ

| N/A | Published : Jan 26 2025, 01:30 AM IST / Updated: Jan 26 2025, 04:33 AM IST

ಸಾರಾಂಶ

ಐಶ್ವರ್ಯಗೌಡ ವಿರುದ್ಧ ಮಂಡ್ಯ ನಗರದ ರವಿಕುಮಾರ್ ಮತ್ತು ಪೂರ್ಣಿಮಾ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆ ಹಿನ್ನೆಲೆಯಲ್ಲಿ ಐಶ್ವರ್ಯಗೌಡ  ವಿಚಾರಣೆಗೆ ಹಾಜರಾದರು.

  ಮಂಡ್ಯ : ಸಂಸದ ಡಿ.ಕೆ.ಸುರೇಶ್ ತಂಗಿ ಎಂದೇಳಿಕೊಂಡು 55 ಲಕ್ಷ ರು. ಹಣ ಮತ್ತು ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಐಶ್ವರ್ಯಗೌಡ ತಮ್ಮ ಪತಿ ಹರೀಶ್ ಜೊತೆ ಶನಿವಾರ ನಗರದ ಸೈಬರ್ ಕ್ರೈಂ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು.

ಐಶ್ವರ್ಯಗೌಡ ವಿರುದ್ಧ ನಗರದ ರವಿಕುಮಾರ್ ಮತ್ತು ಪೂರ್ಣಿಮಾ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಪ್ರಕರಣದ ವಿಚಾರಣೆಗೆ ಬರುವಂತೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆ ಹಿನ್ನೆಲೆಯಲ್ಲಿ ಐಶ್ವರ್ಯಗೌಡ ಮಧ್ಯಾಹ್ನ 12.30ರ ವೇಳೆಗೆ ವಿಚಾರಣೆಗೆ ಹಾಜರಾದರು.

ನೀಲಿ ಸೀರೆ ಉಟ್ಟು ಪತಿಯೊಂದಿಗೆ ಕಾರಿನಲ್ಲಿ ಬಂದಿಳಿದ ಐಶ್ವರ್ಯಗೌಡ ವೈಯ್ಯಾರದಿಂದಲೇ ನಡೆದುಕೊಂಡು ಠಾಣೆ ಒಳಗೆ ತೆರಳಿದರು. ಸಾಲು ಸಾಲು ವಂಚನೆ ಆರೋಪಗಳಿದ್ದಿರೂ ಮುಖದಲ್ಲಿ ಸ್ವಲ್ಪವೂ ಪಶ್ಚಾತ್ತಾಪ, ಭಯ ಆಕೆಯನ್ನು ಕಾಡುತ್ತಿರಲಿಲ್ಲ.

ಸೈಬರ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ಪಿ ಶಿವಮೂರ್ತಿ ಅವರು ಐಶ್ವರ್ಯಗೌಡ ಅವರಿಗಾಗಿ ಕೆಲವೊಂದು ಪ್ರಶ್ನೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು.

ಡಿವೈಎಸ್ಪಿ ಶಿವಮೂರ್ತಿ ಪ್ರಶ್ನೆಗಳಿಗೆ ಐಶ್ವರ್ಯ ಉತ್ತರಿಸುತ್ತಿದ್ದಳೆಂದು ತಿಳಿದುಬಂದಿದ್ದು, ಐಶ್ವರ್ಯಗೌಡ ನೀಡುತ್ತಿದ್ದ ಹೇಳಿಕೆಯನ್ನು ಪೊಲೀಸ್ ಸಿಬ್ಬಂದಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ದೂರುದಾರರು ನಿಮಗೆ ಹೇಗೆ, ಎಷ್ಟು ವರ್ಷದಿಂದ ಪರಿಚಯ?

ದೂರುದಾರರಿಗೂ ನಿಮಗೂ ಹಣಕಾಸಿನ ವ್ಯವಹಾರ ಇತ್ತಾ? ಎಂದೆಲ್ಲಾ ಐಶ್ವರ್ಯಗೌಡ ಅವರನ್ನು ಪೊಲೀಸರು ಪ್ರಶ್ನಿಸಿದರು. ಪೊಲೀಸರ ಪ್ರಶ್ನೆಗೆ ಐಶ್ವರ್ಯಗೌಡ ನಯವಾಗಿಯೇ ಉತ್ತರಿಸಿದರೆಂದು ಹೇಳಲಾಗಿದೆ.

ದೂರುದಾರರ ಜೊತೆ ಸಂಬಂಧ ಇದ್ದದ್ದು, ಹಣಕಾಸಿನ ವ್ಯವಹಾರ ಇದ್ದಿದ್ದು ಸತ್ಯ. ಪಡೆದ ಹಣ, ಚಿನ್ನಾಭರಣವನ್ನು ಈಗಾಗಲೇ ನಾನು ವಾಪಸ್ ಮಾಡಿದ್ದೇನೆ. ಆದರೂ ನನ್ನ ಮೇಲೆ ದುರುದ್ದೇಶದಿಂದ ದೂರು ಕೊಟ್ಟಿದ್ದಾರೆ ಎಂದು ಐಶ್ವರ್ಯಗೌಡ ಉತ್ತರಿಸಿದ್ದಾರೆಂದು ತಿಳಿದುಬಂದಿದೆ.

ರವಿಕುಮಾರ್ ಮತ್ತು ಪೂರ್ಣಿಮಾ ನೀಡಿರುವ ದೂರು ಮಾತ್ರವಲ್ಲದೇ, ಚಾಮುಂಡೇಶ್ವರಿ ನಗರ ನಿವಾಸಿ ಸೌಭಾಗ್ಯ ಅವರು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಐಶ್ವರ್ಯಗೌಡ, ಆಕೆಯ ಪತಿ ಹರೀಶ್, ಸಹೋದರ ಮಂಜುನಾಥ್ ಮತ್ತು ಯಶವಂತ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ರಿಯಲ್ ಎಸ್ಟೇಟ್ ಹಾಗೂ ಚೀಟಿ ವ್ಯಹಾರ ಮಾಡುವುದಾಗಿ 2017 ರ ಜನವರಿಯಿಂದ 2017ರ ಜೂನ್ ಅವಧಿಯಲ್ಲಿ ಒಟ್ಟು 33 ಲಕ್ಷ ರು. ಹಣ ಹಾಗೂ 366 ಗ್ರಾಂ ಚಿನ್ನದ ಒಡವೆಗಳನ್ನು ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಪಶ್ಚಿಮ ಠಾಣೆ ಪೊಲೀಸರು ಐಶ್ವರ್ಯಗೌಡ, ಪತಿ ಹರೀಶ್ ಹಾಗೂ ಇತರರು ವಿಚಾರಣೆಗೆ ಹಾಆಜರಾಗುವಂತೆ ನೋಟಿಸ್ ಜಾರಿಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.