ಮಾಜಿ ಸಂಸದ ಡಿಕೆ ಸುರೇಶ್‌ ತಂಗಿ ಹೆಸರಲ್ಲಿ ವಂಚಸಿದ್ದ ಐಶ್ವರ್ಯ ದಂಪತಿ ಇಂದು ಪೊಲೀಸರ ವಶಕ್ಕೆ

| Published : Dec 30 2024, 01:03 AM IST / Updated: Dec 30 2024, 04:16 AM IST

Fraud couple arrested

ಸಾರಾಂಶ

 . ಚಿನ್ನಾಭರಣ ಸಾಲ ಪಡೆದು ವಂಚನೆ ಮಾಡಿದ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಪತಿ ಹರೀಶ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

 ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್‌ ತಂಗಿ ಎಂದು ನಂಬಿಸಿ ಚಿನ್ನದಂಗಡಿ ಮಾಲಕಿಯಿಂದ 8.41 ಕೋಟಿ ರು. ಮೌಲ್ಯದ 14.6 ಕೆ.ಜಿ. ಚಿನ್ನಾಭರಣ ಸಾಲ ಪಡೆದು ವಂಚನೆ ಮಾಡಿದ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಪತಿ ಹರೀಶ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಸೋಮವಾರ ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಪ್ರಕರಣ ಸಂಬಂಧ ಶನಿವಾರ ವಿಚಾರಣೆಗೆ ಹಾಜರಾಗಿದ್ದ ಐಶ್ವರ್ಯಾ ಗೌಡ ದಂಪತಿಯನ್ನು ಬಂಧಿಸಿದ್ದ ಪೊಲೀಸರು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಹೀಗಾಗಿ ಪೊಲೀಸರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ವಂಚನೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ವಶಕ್ಕೆ ಪಡೆಯಲು ರಿಮ್ಯಾಂಡ್‌ ಅಪ್ಲಿಕೇಶನ್‌ ಸಿದ್ಧಪಡಿಸಿರುವ ಪೊಲೀಸರು, ಸೋಮವಾರ ನ್ಯಾಯಾಲಯಕ್ಕೆ ಸಲ್ಲಿಸಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ನಟ ಧರ್ಮೇಂದ್ರ ಪತ್ತೆಗೆ ಮುಂದುವರೆದ ಶೋಧ

ಪ್ರಕರಣ ದಾಖಲಾದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ನಟ ಧರ್ಮೇಂದ್ರನ ಬಂಧನಕ್ಕೆ ಪೊಲೀಸರು ಬೆಂಗಳೂರು, ಮೈಸೂರು ಸೇರಿ ಸುತ್ತಮುತ್ತಲ ಜಿಲ್ಲೆಗಳಲ್ಲಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಆರೋಪಿ ಧರ್ಮೇಂದ್ರ ವಿರುದ್ಧ ಮಾಜಿ ಸಂಸದ ಡಿ.ಕೆ.ಸುರೇಶ್‌ ಹೆಸರಿನಲ್ಲಿ ಚಿನ್ನದಂಗಡಿ ಮಾಲಕಿ ವನಿತಾ ಎಸ್‌.ಐತಾಳ್‌ ಜತೆಗೆ ಮೊಬೈಲ್‌ನಲ್ಲಿ ಮಾತನಾಡಿದ ಹಾಗೂ ಚಿನ್ನದಂಗಡಿಗೆ ಬಂದು ಬೆದರಿಕೆ ಹಾಕಿದ ಆರೋಪವಿದೆ. ಇದಕ್ಕೆ ಪೂರಕವಾಗಿ ಕೆಲ ಮೊಬೈಲ್‌ ಕರೆಗಳ ಆಡಿಯೋಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.