ದೇವಸ್ಥಾನಗಳ ಕಿಟಿಕಿ ಬಳಿ ಹೊಂಚು ಹಾಕಿ ಮಹಿಳೆಯ ಸರ ಕಿತ್ತುಕೊಂಡು ಪರಾರಿ : ಇಬ್ಬರ ಬಂಧನ

| Published : Nov 29 2024, 01:02 AM IST / Updated: Nov 29 2024, 04:18 AM IST

ಸಾರಾಂಶ

ದೇವಸ್ಥಾನಗಳ ಕಿಟಿಕಿ ಬಳಿ ಹೊಂಚು ಹಾಕಿ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್‌ ಕಳ್ಳರನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ದೇವಸ್ಥಾನಗಳ ಕಿಟಿಕಿ ಬಳಿ ಹೊಂಚು ಹಾಕಿ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಇಬ್ಬರು ಖತರ್ನಾಕ್‌ ಕಳ್ಳರನ್ನು ನಂದಿನಿ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಭದ್ರಾವತಿ ಮೂಲದ ವಸಂತ ರಾಜು(40) ಮತ್ತು ಶಿವಮೊಗ್ಗ ಮೂಲದ ಅತೀಕ್‌ ಉಲ್ಲಾ(27) ಬಂಧಿತರು. ಆರೋಪಿಗಳು ಅ.11ರಂದು ನಂದಿನಿ ಲೇಔಟ್‌ನ ದೇವಸ್ಥಾನವೊಂದರಲ್ಲಿ ಭಜನೆಯಲ್ಲಿ ತೊಡಗಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಿಟಕಿಯಲ್ಲಿ ಕೈ ಹಾಕಿ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಸುಲಭವಾಗಿ ಹಣ ಗಳಿಸಲು ಸರಗಳವು: ಬಂಧಿತ ಆರೋಪಿಗಳ ಪೈಕಿ ವಸಂತ ರಾಜು 3 ವರ್ಷಗಳ ಹಿಂದೆ ನಗರದ ಕಂಠೀರವ ಸ್ಟುಡಿಯೋಗದಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ. ಬಳಿಕ ಕೆಲಸ ಬಿಟ್ಟಿದ್ದ. ಮತ್ತೊಬ್ಬ ಆರೋಪಿ ಅತೀಕ್‌ ಉಲ್ಲಾ ಶಿವಮೊಗ್ಗದಲ್ಲಿ ಮೆಕ್ಯಾನಿಕ್ ಆಗಿದ್ದಾನೆ. ಇಬ್ಬರು ವಿಪರೀತ ಸಾಲ ಮಾಡಿಕೊಂಡಿದ್ದರು. ಹೀಗಾಗಿ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಸರಗಳ್ಳತನಕ್ಕೆ ಇಳಿದಿದ್ದರು. ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿ, ಕಿಟಕಿ ಪಕ್ಕ ಬರುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದರು.

ರೈಲಿನಲ್ಲಿ ಪರಾರಿ: ಆರೋಪಿಗಳು ದೇವಸ್ಥಾನದ ಅನತಿ ದೂರಿನಲ್ಲಿ ಬೈಕ್‌ ನಿಲ್ಲಿಸುತ್ತಿದ್ದರು. ಬಳಿಕ ದೇವಸ್ಥಾನದ ಕಿಟಕಿ ಬಳಿ ಹೊಂಚು ಹಾಕಿ ಮಹಿಳೆಯರ ಸರ ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗುತ್ತಿದ್ದರು. ಬಳಿಕ ಯಶವಂತಪುರ ರೈಲು ನಿಲ್ದಾಣದಿಂದ ರೈಲಿನಲ್ಲಿ ಶಿವಮೊಗ್ಗಕ್ಕೆ ತೆರಳುತ್ತಿದ್ದರು. ಬಳಿಕ ಕದ್ದ ಚಿನ್ನ ಸರ ಮಾರಾಟ ಮಾಡಿ ಬಂದ ಹಣವನ್ನು ಹಂಚಿಕೊಂಡು ಮೋಜು-ಮಸ್ತಿ ಮಾಡುತ್ತಿದ್ದರು.

ಮೂರು ಪ್ರಕರಣ ಪತ್ತೆ: ನಂದಿನಿ ಲೇಔಟ್‌ ಪ್ರಕರಣದ ತನಿಖೆ ವೇಳೆ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿ ಪರಿಶೀಲನೆ ವೇಳೆ ಸಿಕ್ಕ ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ದಾವಣಗೆರೆ 1 ಮತ್ತು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣ ಸೇರಿ ಒಟ್ಟು 3 ಸರಗಳವು ಪ್ರಕರಣಗಳು ಪತ್ತೆಯಾಗಿವೆ.