ಕೈ, ಕಾಲು ಕತ್ತರಿಸಿ ಬಿಜೆಪಿ ಕಾರ್ಯಕರ್ತೆಯ ಹತ್ಯೆ ಜೈಲಿಂದ ಬಂದವನ ಕೊಚ್ಚಿ ಹತ್ಯೆ

| Published : Feb 26 2024, 01:32 AM IST / Updated: Feb 26 2024, 08:52 AM IST

ಕೈ, ಕಾಲು ಕತ್ತರಿಸಿ ಬಿಜೆಪಿ ಕಾರ್ಯಕರ್ತೆಯ ಹತ್ಯೆ ಜೈಲಿಂದ ಬಂದವನ ಕೊಚ್ಚಿ ಹತ್ಯೆ
Share this Article
  • FB
  • TW
  • Linkdin
  • Email

ಸಾರಾಂಶ

ಹಣಕ್ಕಾಗಿ ವೃದ್ಧೆಯೊಬ್ಬರ ಕೈ, ಕಾಲು ಕತ್ತರಿಸಿ ಭೀಕರವಾಗಿ ಕೊಂದು ಬಳಿಕ ಡ್ರಮ್‌ನಲ್ಲಿ ಮೃತದೇಹವನ್ನು ತುಂಬಿ ಬೀದಿಗೆ ಬಿಸಾಡಿ ಮೃತರ ಪರಿಚಿತರೇ ಪರಾರಿ ಆಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಣಕ್ಕಾಗಿ ವೃದ್ಧೆಯೊಬ್ಬರ ಕೈ, ಕಾಲು ಕತ್ತರಿಸಿ ಭೀಕರವಾಗಿ ಕೊಂದು ಬಳಿಕ ಡ್ರಮ್‌ನಲ್ಲಿ ಮೃತದೇಹವನ್ನು ತುಂಬಿ ಬೀದಿಗೆ ಬಿಸಾಡಿ ಮೃತರ ಪರಿಚಿತರೇ ಪರಾರಿ ಆಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಆರ್‌.ಪುರ ಸಮೀಪದ ನಿಸರ್ಗ ಲೇಔಟ್‌ ನಿವಾಸಿ ಸುಶೀಲಮ್ಮ (76) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತಳ ಪರಿಚಿತ ದಿನೇಶ್ ಹಾಗೂ ಆತನ ಸಹಚರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 

ನಿಸರ್ಗ ಲೇಔಟ್‌ನ ಮನೆಗಳ ಓಣಿಯಲ್ಲಿ ಎರಡು ದಿನಗಳಿಂದ ಅನಾಥವಾಗಿ 10 ಲೀಟರ್‌ ಸಾಮರ್ಥ್ಯದ ಡ್ರಮ್‌ ಇಟ್ಟಿರುವುದನ್ನು ಭಾನುವಾರ ಗಮನಿಸಿದ ಸ್ಥಳೀಯರು, ಶಂಕೆ ಮೇರೆಗೆ ಆ ಡ್ರಮ್‌ ಅನ್ನು ಬಳಿ ತೆರಳಿ ನೋಡಿದಾಗ ಅದರೊಳಗೆ ಸುಶೀಲಮ್ಮ ಅವರ ಮೃತದೇಹ ಕಂಡು ಬಂದಿದೆ.

ಕೂಡಲೇ ಪೊಲೀಸ್‌ ನಿಯಂತ್ರಣ ಕೊಠಡಿಗೆ ಸ್ಥಳೀಯರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದಾಗ ಕೊಲೆ ಹಿಂದೆ ಪರಿಚಿತರ ಕೈವಾಡ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಿಜೆಪಿ ಕಾರ್ಯಕರ್ತೆ: ಚಿಕ್ಕಬಳ್ಳಾಪುರ ಜಿಲ್ಲೆಯ ಮೃತ ಸುಶೀಲಮ್ಮ ಅವರು, ಹಲವು ವರ್ಷಗಳ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು. ಮೃತರಿಗೆ ಓರ್ವ ಗಂಡು ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 

ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ ಮನೆ ಬೋಗ್ಯಕ್ಕೆ ಪಡೆದು ಮಕ್ಕಳಿಂದ ಪ್ರತ್ಯೇಕವಾಗಿ ಅಜ್ಜಿ ವಾಸವಾಗಿದ್ದರು. ಅದೇ ಕಟ್ಟಡದಲ್ಲಿ ಅವರ ಕಿರಿಯ ಪುತ್ರಿ ಮತ್ತು ಮಗಳು ಹಾಗೂ ಅಜ್ಜಿ ಮನೆ ಸಮೀಪದಲ್ಲೇ ಅವರ ಮಗ ಕೂಡ ವಾಸವಾಗಿದ್ದರು.ಪ್ರತಿ ತಿಂಗಳು ತಾಯಿಗೆ ₹2-3 ಸಾವಿರವನ್ನು ಪುತ್ರ ನೀಡುತ್ತಿದ್ದರು.

ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಸುಶೀಲಮ್ಮ ಅವರು, ಸ್ಥಳೀಯ ಶಾಸಕ ಹಾಗೂ ಮಾಜಿ ಸಚಿವ ಬೈರತಿ ಬಸವರಾಜ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. 

ಆಗ ಅವರಿಗೆ ದಿನೇಶ್ ಎಂಬಾತನ ಪರಿಚಯವಾಗಿದ್ದು, ಆಗಾಗ್ಗೆ ಅಜ್ಜಿಗೆ ಮನೆಗೆ ಬಂದು ಹೋಗುವುದನ್ನು ಆತ ಮಾಡುತ್ತಿದ್ದ ಎಂದು ಮೂಲಗಳು ಹೇಳಿವೆ.

ಈ ಹತ್ಯೆಗೆ ನಿಖರವಾಗಿ ಕಾರಣ ಗೊತ್ತಾಗಿಲ್ಲ. ಹಣಕ್ಕಾಗಿ ದಿನೇಶ್ ಕೃತ್ಯ ಎಸಗಿರಬಹುದು ಎಂದು ಶಂಕೆ ಇದೆ. ಮನೆಯಲ್ಲಿ ಅಜ್ಜಿ ಜತೆ ದಿನೇಶ್ ಮಾತನಾಡುತ್ತ ನಿಂತಿರುವುದನ್ನು ಮೃತರ ಮೊಮ್ಮಗಳು ನೋಡಿದ್ದಳು. ಇದಾದ ಬಳಿಕ ಅಜ್ಜಿ ಹತ್ಯೆಯಾಗಿದೆ.

 ಹೀಗಾಗಿ ದಿನೇಶ್ ಮೇಲೆ ಅನುಮಾನ ಹೆಚ್ಚಿದ್ದು, ಕೃತ್ಯ ಬೆಳಕಿಗೆ ಬಂದ ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮನೆ ಹಿಂಬದಿ ಓಣಿಯಲ್ಲಿ ಶವವಿದ್ದ ಡ್ರಮ್‌ ಪತ್ತೆಮನೆಯಲ್ಲಿ ಹತ್ಯೆ ಮಾಡಿದ ಬಳಿಕ ಮೃತದೇಹವನ್ನು ಮನೆಯಲ್ಲಿದ್ದ ಡ್ರಮ್‌ನಲ್ಲಿ ತುಂಬಿ ಮನೆ ಹಿಂಬದಿಯ ಓಣಿಯಲ್ಲಿ ಮೃತದೇಹ ತುಂಬಿದ್ದ ಡ್ರಮ್ಮನ್ನು ಇಟ್ಟು ಪರಾರಿಯಾಗಿದ್ದರು. 

ಈ ಹತ್ಯೆ ಕೃತ್ಯ ಶುಕ್ರವಾರ ರಾತ್ರಿ ನಡೆದಿರಬಹುದು. ಕೆಲವು ಬಾರಿ ಎರಡ್ಮೂರು ದಿನಗಳು ಅಜ್ಜಿ ಯಾರಿಗೂ ತಿಳಿಸದೆ ಹೊರ ಹೋಗುತ್ತಿದ್ದರು.

ಹೀಗಾಗಿ ಎರಡು ದಿನಗಳಿಂದ ಮನೆ ಬಳಿ ಕಾಣದೆ ಹೋದಾಗ ಮೃತರ ಮಗಳು ಹಾಗೂ ಮೊಮ್ಮಗಳಿಗೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದ್ದರಿಂದ ಹತ್ಯೆ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.