ಸಾರಾಂಶ
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ವಿರುದ್ಧ ಮೃತನ ರಕ್ತ ಹಾಗೂ ಫೋಟೋಗಳು ಮಾತ್ರವಲ್ಲದೆ ಹತ್ಯೆ ಕೃತ್ಯ ನಡೆದ ಪಟ್ಟಣಗೆರೆ ಶೆಡ್‌ನ ಮಣ್ಣು ಸಹ ಮಹತ್ವದ ವೈಜ್ಞಾನಿಕ ಪುರಾವೆಯಾಗಿದೆ.
ಪಟ್ಟಣಗೆರೆ ಶೆಡ್‌ನ ಮಣ್ಣು ದರ್ಶನ್ ಮತ್ತು ಅವರ ಮೂವರು ಸಹಚರರು ಧರಿಸಿದ್ದ ಶೂಗಳಲ್ಲಿ ಅಂಟಿದ್ದ ಮಣ್ಣಿಗೆ ಹೋಲಿಕೆಯಾಗಿದೆ ಎಂದು ಖಚಿತಪಡಿಸಿದ್ದ ವಿಧಿ ವಿಜ್ಞಾನ ಪ್ರಯೋಗಾಲದ (ಎಫ್‌ಎಸ್‌ಎಲ್) ವರದಿಯನ್ನು ಆರೋಪ ಪಟ್ಟಿಯಲ್ಲಿ ಪೊಲೀಸರು ಲಗತ್ತಿಸಿದ್ದಾರೆ. ಇದು ದರ್ಶನ್ ವಿರುದ್ಧ ಸಂಗ್ರಹವಾಗಿರುವ ವೈಜ್ಞಾನಿಕ ಸಾಕ್ಷ್ಯಗಳಲ್ಲೊಂದಾಗಿದೆ.
ಈ ಹತ್ಯೆ ಕೃತ್ಯದ ರುಜುವಾತಿಗೆ ಪ್ರತ್ಯಕ್ಷ, ಸಾಂದರ್ಭಿಕ ಹಾಗೂ ವೈದ್ಯಕೀಯ ಪುರಾವೆಗಳಿಗೆ ಕೊಟ್ಟಷ್ಟೇ ಪ್ರಾಮುಖ್ಯತೆಯನ್ನು ವೈಜ್ಞಾನಿಕ ಸಾಕ್ಷ್ಯಗಳಿಗೆ ನೀಡಿರುವ ಪೊಲೀಸರು, ಪ್ರತಿ ಹಂತದಲ್ಲೂ ಸಣ್ಣ ಕುರುಹನ್ನೂ ಉಪೇಕ್ಷಿಸದೆ ತನಿಖೆ ನಡೆಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ವೇಳೆ ಧರಿಸಿದ್ದರು ಎಂಬ ಶಂಕೆ ಮೇರೆಗೆ ದರ್ಶನ್ ಗ್ಯಾಂಗ್‌ನಿಂದ ಶೂ ಹಾಗೂ ಚಪ್ಪಲಿಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಅವುಗಳಲ್ಲಿ ಅಂಟಿದ್ದ ಮಣ್ಣಿನ ತುಣುಕುಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಪೊಲೀಸರು ಕಳುಹಿಸಿದ್ದರು. ಹತ್ಯೆ ಕೃತ್ಯ ನಡೆದ ಪಟ್ಟಣಗೆರೆ ಶೆಡ್‌ನ ಮಣ್ಣು ಹಾಗೂ ಆರೋಪಿಗಳ ಪಾದರಕ್ಷೆಗಳಿಗೆ ಅಂಟಿರುವ ಮಣ್ಣಿಗೂ ಸಾಮ್ಯತೆ ಬಗ್ಗೆ ಪರೀಕ್ಷಿಸಿ ವರದಿ ನೀಡುವಂತೆ ಎಫ್ಎಸ್‌ಎಲ್ ತಜ್ಞರಿಗೆ ಪೊಲೀಸರು ಕೋರಿದ್ದರು. ಅಂತೆಯೇ ಪರೀಕ್ಷೆ ನಡೆಸಿ ಎಫ್‌ಎಸ್ಎಲ್ ವರದಿ ನೀಡಿದ್ದು, ಕೊಲೆ ಪ್ರಕರಣದ 17 ಆರೋಪಿಗಳ ಪೈಕಿ ದರ್ಶನ್, ಅವರ ಮನೆ ಕೆಲಸಗಾರ ನಂದೀಶ್, ವ್ಯವಸ್ಥಾಪಕ ನಾಗರಾಜ್ ಅವರು ಧರಿಸಿದ್ದ ಶೂಗಳು ಮತ್ತು ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನ ಚಪ್ಪಲಿಯಲ್ಲಿದ್ದ ಮಣ್ಣಿಗೆ ಹೋಲಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ. ನ್ಯಾಯಾಲಯಕ್ಕೆ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಎಫ್ಎಸ್‌ಎಲ್ ವರದಿಯನ್ನು ಪೊಲೀಸರು ಲಗತ್ತಿಸಿದ್ದಾರೆ.
ವಿಜಯಲಕ್ಷ್ಮಿ ಮನೆಗೆ ಶೂ ಸಾಗಿಸಿದ್ದ ದರ್ಶನ್
ರೇಣುಕಾಸ್ವಾಮಿ ಹತ್ಯೆ ಬಳಿಕ ತಾವು ಧರಿಸಿದ್ದ ಶೂಗಳನ್ನು ಹೊಸಕೆರೆಹಳ್ಳಿ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಫ್ಲ್ಯಾಟ್‌ಗೆ ದರ್ಶನ್ ಕಳುಹಿಸಿದ್ದರು. ಬಳಿಕ ಅವರ ಪತ್ನಿ ಮನೆಯಿಂದಲೇ ಆ ಶೂಗಳನ್ನು ಪೊಲೀಸರು ಜಪ್ತಿ ಮಾಡಿದ್ದರು. ಅಲ್ಲದೆ ಈ ಶೂಗಳ ವಿಚಾರವಾಗಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರನ್ನು ವಿಚಾರಣೆಗೊಳಪಡಿಸಿ ಹೇಳಿಕೆ ಸಹ ದಾಖಲಿಸಿಕೊಂಡಿದ್ದರು.