ಸಾರಾಂಶ
ಪಾಂಡವಪುರ : ಇನೋವಾ ಕಾರು ಡಿಕ್ಕಿಯಾಗಿ ಹೊಂಡಾ ಆಕ್ಟೀವ್ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೆಳ್ಳಾಳೆ ಸಮೀಪ ನಡೆದಿದೆ. ತಾಲೂಕಿನ ನಾರಾಯಣಪುರ ಗ್ರಾಪಂ ಸದಸ್ಯ ಹಾಗೂ ಡೇರಿ ಕಾರ್ಯದರ್ಶಿ ವಳಗೆರೆದೇವರಹಳ್ಳಿ ನಿವಾಸಿ ರಾಮಕೃಷ್ಣ ಮೃತ ವ್ಯಕ್ತಿ.
ತಾಲೂಕಿನ ಬೆಳ್ಳಾಳೆ ಸಮೀಪ ರೈಸ್ ಮಿಲ್ ಬಳಿ ಎರೆಗೌಡನಹಳ್ಳಿಗೆ ತಿರುವು ಪಡೆದುಕೊಳ್ಳುವಾಗ ಇನೋವಾ ಕಾರು ಡಿಕ್ಕಿಯಾಗಿ ತಲೆಗೆ ಗಂಭೀರ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೃತ ರಾಮಕೃಷ್ಣ ಅವರನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ: 5 ಮಂದಿ ವಶಕ್ಕೆ
ಮಳವಳ್ಳಿ: ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಬೆಂಡರವಾಡಿ ಗ್ರಾಮದಲ್ಲಿ ಜೂಜು ಅಡ್ಡೆ ಮೇಲೆ ಸೋಮವಾರ ದಾಳಿ ನಡೆಸಿದು ಪೊಲೀಸರು 5 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಬೆಂಡರವಾಡಿ ಗ್ರಾಮದ ಹೊರವಲಯದಲ್ಲಿ ಜೂಜು ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಿರುಗಾವಲು ಪಿಎಸ್ಐ ಡಿ.ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ 12000 ರು.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಹಲವು ಸಿಬ್ಬಂದಿಗಳು ಭಾಗಿಯಾಗಿದ್ದರು. ಈ ಸಂಬಂಧ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಥಾನದ ಬೀಗ ಕದ್ದು ಪರಾರಿ
ಭಾರತೀನಗರ: ಅಣ್ಣೂರು ಗ್ರಾಮದ ಶ್ರೀಬೊಮ್ಮಲಿಂಗೇಶ್ವರ ದೇವಸ್ಥಾನದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಕಿಡಿಗೇಡಿಗಳು ಮುರಿದು ಕದ್ದು ಪರಾರಿಯಾಗಿರುವ ಘಟನೆ ಜರುಗಿದೆ.ಗ್ರಾಮದ ಹೊರವಲಯದ ಶ್ರೀಬೊಮ್ಮಲಿಂಗೇಶ್ವರ ಮತ್ತು ಶ್ರೀಬೋರಪ್ಪನ ದೇವಸ್ಥಾನದ ಬಾಗಿಲನ್ನು ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು ಬೀಗವನ್ನು ಕದ್ದು ಪರಾರಿಯಾಗಿದ್ದಾರೆ. ದೇವಸ್ಥಾನದಲ್ಲಿ ದೇವರ ಮೂರ್ತಿಯನ್ನು ಬಿಟ್ಟು ಯಾವುದೇ ಬೆಲೆಬಾಳುವ ವಸ್ತು ಇಲ್ಲದ ಕಾರಣ ಬೀಗವನ್ನೇ ಹೊತ್ತೊಯ್ದಿದ್ದಾರೆ. ವಿಷಯ ತಿಳಿದ ತಕ್ಷಣ ಅರ್ಚಕ ದೇವಸ್ಥಾನಕ್ಕೆ ಭೇಟಿನೀಡಿ ಗ್ರಾಮದ ಯಜಮಾನರಿಗೆ ಮಾಹಿತಿ ನೀಡಿದ್ದಾರೆ.