ಅಪೆ ಆಟೋ ಮುಖಾಮುಖಿಡಿಕ್ಕಿ: ಬೈಕ್‌ ಸವಾರ ಸಾವು

| Published : Jan 21 2024, 01:34 AM IST

ಸಾರಾಂಶ

ನಗರದಲ್ಲಿ ನಡೆದ 2 ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಸಾವನ್ನಪ್ಪಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅಪೆ ಆಟೋ ಜತೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟ ಘಟನೆ ಭೂಪಸಂದ್ರ ಮುಖ್ಯರಸ್ತೆಯಲ್ಲಿ ನಡೆದಿದೆ.

ಆರ್‌.ಎಂ.ವಿ 2ನೇ ಹಂತದ ನಿವಾಸಿ ದೇವರಾಜ್‌ (43) ಮೃತ ದುರ್ದೈವಿ. ಈ ಅಪಘಾತದ ಬಳಿಕ ತಪ್ಪಿಸಿಕೊಂಡಿರುವ ಆಟೋ ಚಾಲಕನ ಪತ್ತೆಗೆ ತನಿಖೆ ನಡೆದಿದೆ. ನಾಗಶೆಟ್ಟಿಹಳ್ಳಿ ಕಡೆಯಿಂದ ಭೂಪಸಂದ್ರಕ್ಕೆ ಶುಕ್ರವಾರ ರಾತ್ರಿ ದೇವರಾಜ್ ತೆರಳುವಾಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಮ್ಮ ಕುಟುಂಬದ ಜತೆ ಆರ್‌.ಎಂ.ವಿ 2ನೇ ಹಂತದಲ್ಲಿ ದೇವರಾಜ್ ನೆಲೆಸಿದ್ದರು. ಭೂಪಸಂದ್ರದಿಂದ ನಾಗಶೆಟ್ಟಿಹಳ್ಳಿ ಕಡೆಗೆ ತೆರಳುತ್ತಿದ್ದ ಅಪೆ ಆಟೋವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಚಾಲಕ ಬಂದಿದ್ದ. ಅದೇ ವೇಳೆ ನಾಗಶೆಟ್ಟಿಹಳ್ಳಿಯಿಂದ ಭೂಪಸಂದ್ರಕ್ಕೆ ಬರುತ್ತಿದ್ದ ಬೈಕ್‌ಗೆ ಆಟೋ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ದೇವರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್‌.ಟಿ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕಿಂದ ಕೆಳಗೆ ಬಿದ್ದವಳ

ಮೇಲೆಯೇ ಹರಿದ ಲಾರಿ

ಕನ್ನಡಪ್ರಭ ವಾರ್ತೆ ಬೆಂಗಳೂರುದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಲಾರಿ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಮಹಿಳೆ ದೇಹದ ಮೇಲೆಯೇ ಲಾರಿಯ ಚಕ್ರಗಳು ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಾಗಲೂರು ನಿವಾಸಿ ಶೋಭಾ(56) ಮೃತ ದುರ್ದೈವಿ. ಶನಿವಾರ ಮಧ್ಯಾಹ್ನ 1 ಗಂಟೆಗೆ ಬಳ್ಳಾರಿ ರಸ್ತೆಯ ಕೆಂಪಾಪುರ ಬಸ್‌ ನಿಲ್ದಾಣ (ಎಸ್ಟೀಮ್‌ ಮಾಲ್‌) ಬಳಿ ಈ ದುರ್ಘಟನೆ ನಡೆದಿದೆ.ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶೋಭಾ ಅವರು ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದರು. ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದ ಶೋಭಾ ಮೇಲೆಯೇ ಲಾರಿಯ ಚಕ್ರಗಳು ಉರುಳಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಕಾರಣವಾದ ಲಾರಿಯನ್ನು ಜಪ್ತಿ ಮಾಡಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಬ್ಬಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.