ಸಾರಾಂಶ
ಬೆಂಗಳೂರು : ಇತ್ತೀಚೆಗೆ ಕ್ಷುಲ್ಲಕ ಕಾರಣಕ್ಕೆ ಕಾರು ಚಾಲಕನಿಗೆ ಉಗಿದು ಕಾರಿನ ಮಿರರ್ ಮುರಿದು ಅವಾಚ್ಯ ಶಬ್ಧಗಳಿಂದ ನಿಂದಿಸಿ ದುರ್ವರ್ತನೆ ತೋರಿದ್ದ ಆಟೋ ಚಾಲಕನನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಯಮಲೂರು ನಿವಾಸಿ ಕಿರಣ್(34) ಬಂಧಿತ ಆಟೋ ಚಾಲಕ. ಆ.5ರಂದು ಮಧ್ಯಾಹ್ನ ಸುಮಾರು 12.50ಕ್ಕೆ ಎಚ್‌ಎಎಲ್ ಮುಖ್ಯ ರಸ್ತೆಯ ಜಂಕ್ಷನ್‌ನಲ್ಲಿ ಈ ಘಟನೆ ನಡೆದಿದೆ. ವಿಜ್ಞಾನನಗರ ನಿವಾಸಿ ಅಲೆಕ್ಸ್ ಬಾಬಿ ವೆಂಪಲ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿ ಆಟೋ ಚಾಲಕ ಕಿರಣ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಅಲೆಕ್ಸ್ ಬಾಬಿ ಅವರು ತಮ್ಮ ಕಾರಿನಲ್ಲಿ ಎಚ್‌ಎಎಲ್ ಮುಖ್ಯರಸ್ತೆಯ ಜಂಕ್ಷನ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ರಸ್ತೆ ಬದಿ ಆಟೋ ನಿಲ್ಲಿಸಿಕೊಂಡಿದ್ದ ಕಿರಣ್ ಶಾಲಾ ಮಕ್ಕಳನ್ನು ಕೆಳಗೆ ಇಳಿಸಿದ್ದಾನೆ. ಈ ವೇಳೆ ಪಕ್ಕದಲ್ಲಿ ಬಂದ ಅಲೆಕ್ಸ್ ಅವರ ಕಾರನ್ನು ತಡೆದ ಆಟೋ ಚಾಲಕ ಕಿರಣ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.
ಅಷ್ಟರಲ್ಲಿ ಮೊಬೈಲ್ ತೆಗೆದು ವಿಡಿಯೋ ಮಾಡಿಕೊಳ್ಳಲು ಅಲೆಕ್ಸ್ ಮುಂದಾಗಿದ್ದಾರೆ. ಇದರಿಂದ ಕೋಪಗೊಂಡ ಕಿರಣ್, ಅಲೆಕ್ಸ್‌ನತ್ತ ಉಗಿದು, ಕಾರಿನ ಮಿರರ್‌ಗೆ ಕೈಯಿಂದ ಗುದ್ದಿ ಜಖಂಗೊಳಿಸಿದ್ದಾನೆ. ಬಳಿಕ ಅಲೆಕ್ಸ್ ಅವರು ಎಚ್‌ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕ ಕಿರಣ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.