ಸಾರಾಂಶ
ಬೀಗ ಹಾಕಿದ ಮನೆಗಳು, ಪ್ರಯಾಣಿಕರ ದಟ್ಟಣೆ ಇರುವ ಬಸ್‌ಗಳು, ದೇವಸ್ಥಾನಗಳ ಬಳಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೀಗ ಹಾಕಿದ ಮನೆಗಳು, ಪ್ರಯಾಣಿಕರ ದಟ್ಟಣೆ ಇರುವ ಬಸ್‌ಗಳು, ದೇವಸ್ಥಾನಗಳ ಬಳಿ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಎಲೆಕ್ಟ್ರಾನಿಕ್‌ಸಿಟಿಯ ಲಕ್ಷ್ಮೀ ಲೇಔಟ್ ನಿವಾಸಿ ಇಮ್ರಾನ್ ಖಾನ್ (40) ಬಂಧಿತ. ಆರೋಪಿಯಿಂದ 16.50 ಲಕ್ಷ ರು. ಮೌಲ್ಯದ 235 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳವು, ಬಸ್‌ಗಳಲ್ಲಿ ಸರಗಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ಒಂದು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿಗಳ ಹುಡುಕಾಟದಲ್ಲಿ ಇದ್ದಾಗ ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಅವಲಹಳ್ಳಿ ಮಸೀದಿ ಬಳಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜನದಟ್ಟಣೆಯಲ್ಲೆ ಕೈ ಚಳಕ: ಆರೋಪಿಯು ವೃತ್ತಿಪರ ಕಳ್ಳನಾಗಿದ್ದು, ಈ ಹಿಂದೆ ಹಲವು ಪ್ರಕರಣಗಳಲ್ಲಿ ಬಂಧಿತನಾಗಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತನ್ನ ಹಳೇ ಚಾಳಿ ಮುಂದುವರೆಸಿದ್ದ. ಆರೋಪಿಯ ಇಮ್ರಾನ್ ಖಾನ್ ನಗರದ ವಿವಿಧಡೆ ಬೀಗ ಹಾಕಿದ ಮನೆಗಳು, ಪ್ರಯಾಣಿಕರ ದಟ್ಟಣೆ ಇರುವ ಬಸ್‌ಗಳು, ದೇವಸ್ಥಾನಗಳ ಬಳಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕಳವು ಮಾಡುತ್ತಿದ್ದ. ಕದ್ದ ಆಭರಣಗಳನ್ನು ಪರಿಚಿತ ಚಿನ್ನಾಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದ. ಈತನಿಂದ ಚಿನ್ನಾಭರಣ ಖರೀದಿಸಿದ್ದ ನಗರ್ತ ಪೇಟೆಯ ಇಬ್ಬರು ಚಿನ್ನಾಭರಣ ವ್ಯಾಪಾರಿಗಳಿಗೆ ನೋಟಿಸ್ ನೀಡಿ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
12 ಪ್ರಕರಣ ಪತ್ತೆ: ಆರೋಪಿ ಇಮ್ರಾನ್ ಖಾನ್‌ನ ಬಂಧನದಿಂದ ಕೋಣನಕುಂಟೆ ಆರು, ಹುಳಿಮಾವು, ಬನಶಂಕರಿ ತಲಾ ಎರಡು, ಕುಮಾರಸ್ವಾಮಿ ಲೇಔಟ್, ತಲಘಟ್ಟಪುರ ತಲಾ ಒಂದು ಸೇರಿ ಒಟ್ಟು 12 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.