ವೈರಲ್‌ ವಿಡಿಯೋ ಆಧರಿಸಿ ಹಲ್ಲೆಕೋರರ ಸೆರೆ

| Published : Apr 06 2024, 02:06 AM IST / Updated: Apr 06 2024, 04:53 AM IST

arrest 3

ಸಾರಾಂಶ

ವೃತ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಸ್ನೇಹಿತನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ ಮಾಡಿದ್ದ ಗೆಳೆಯ, ಇದಕ್ಕೆ ಸಹಕರಿಸಿ ಮೂವರನ್ನು ಬಂಧಿಸಲಾಗಿದೆ. ವಿಡಿಯೋ ಆಧರಿಸಿ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ವ್ಯಕ್ತಿ ಮೇಲೆ ಹಲ್ಲೆ ಕೃತ್ಯ ಸಂಬಂಧ ವೈರಲ್ ಆಗಿದ್ದ ವಿಡಿಯೋದ ಮೂಲ ಪತ್ತೆ ಹಚ್ಚಿದ ಹೆಣ್ಣೂರು ಠಾಣೆ ಪೊಲೀಸರು, ನಡುರಸ್ತೆಯಲ್ಲಿ ಗೂಂಡಾಗಿರಿ ನಡೆಸಿದ್ದ ಐವರನ್ನು ಬಂಧಿಸಿದ್ದಾರೆ.

ಟಿ.ಸಿ.ಪಾಳ್ಯದ ಅನೂಷ್ ಕ್ಯಾಲ್ವೀನ್, ಮುತ್ತು, ಕಲ್ಯಾಣನಗರದ ವಿನೀಷ್, ಕೆ.ಆರ್.ಪುರದ ಸಂದೀಪ್ ಮತ್ತು ಉಮಾಶಂಕರ್ ರೆಡ್ಡಿ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ವೈಯಕ್ತಿಕದ ದ್ವೇಷದ ಹಿನ್ನೆಲೆಯಲ್ಲಿ ಹೆಣ್ಣೂರು ಸಮೀಪ ರಸ್ತೆಯಲ್ಲಿ ಅಡ್ಡಗಟ್ಟಿ ತಮ್ಮ ಸ್ನೇಹಿತ ಸುರೇಶ್ ಮೇಲೆ ಆರೋಪಿಗಳು ಗೂಂಡಾಗಿರಿ ನಡೆಸಿದ್ದರು. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.

ಏನೀದು ಘಟನೆ:

ಮಾ.31ರ ಸಂಜೆ 6 ಗಂಟೆಯಲ್ಲಿ ಕಲ್ಯಾಣನಗರದ ಹೊರವರ್ತುಲ ರಸ್ತೆಯಲ್ಲಿ ಸುರೇಶ್‌ನನ್ನು ಅಡ್ಡಗಟ್ಟಿ ಆತನ ಸ್ನೇಹಿತರು ಹಲ್ಲೆ ನಡೆಸಿದ್ದರು. ಈ ಕೃತ್ಯವು ಸಾರ್ವಜನಿಕರೊಬ್ಬರ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿ ಆಧರಿಸಿ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಸಂತ್ರಸ್ತನನ್ನು ಪತ್ತೆ ಹಚ್ಚಿದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಹಲ್ಲೆಕೋರರು ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತ ಸುರೇಶ್ ಮೂಲತಃ ಆಂಧ್ರಪ್ರದೇಶ ರಾಜ್ಯದವರಾಗಿದ್ದು, ಕಳೆದ 5 ತಿಂಗಳಿಂದ ಎಚ್‌ಆರ್‌ಬಿ ಲೇಔಟ್‌ನಲ್ಲಿರುವ ಹೆರಿಟೇಜ್ ಮಿಲ್ಕ್ ಪ್ರಾಡಕ್ಟ್ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಾರತ್ತಹಳ್ಳಿ ಬಳಿ ಸುರೇಶ್ ವಾಸವಾಗಿದ್ದಾರೆ. ಕೆಲ ದಿನಗಳ ಹಿಂದೆ ಕೆಲಸದ ವಿಚಾರವಾಗಿ ಸುರೇಶ್‌ಗೆ ಆ ಕಂಪನಿಯ ಹಂಚಿಕೆದಾರ ಉಮಾಶಂಕರ್‌ ರೆಡ್ಡಿ ಜತೆ ಮನಸ್ತಾಪವಾಗಿತ್ತು. ಕರ್ತವ್ಯಲೋಪದ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡುತ್ತಾನೆ ಎಂದು ರೆಡ್ಡಿ ಕೋಪಕ್ಕೆ ಕಾರಣವಾಗಿತ್ತು. ಈ ವೈ ಮನಸ್ಸು ಹಿನ್ನೆಲೆಯಲ್ಲಿ ಸುರೇಶ್‌ಗೆ ತಮ್ಮ ತಂಟೆಗೆ ಬಾರದಂತೆ ಬೆದರಿಸಲು ತನ್ನ ಸ್ನೇಹಿತ ವಿನೀಷ್ ಜತೆ ಸೇರಿ ರೆಡ್ಡಿ ಹಲ್ಲೆ ಸಂಚು ರೂಪಿಸಿದ್ದ. ಅಂತೆಯೇ ಮಾ.31 ರಂದು ಬೈಕ್‌ನಲ್ಲಿ ಮನೆಗೆ ತೆರಳುವಾಗ ಸುರೇಶ್‌ನನ್ನು ಅಡ್ಡಗಟ್ಟಿ ರೆಡ್ಡಿ ಸಹಚರರಾದ ಮುತ್ತು ಹಾಗೂ ಅನೂಷ್‌ ಹಲ್ಲೆ ನಡೆಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಜೀವ ಭಯದಿಂದ ದೂರು ನೀಡಿರಲಿಲ್ಲ

ಜೀವ ಭಯದಿಂದ ತನ್ನ ಮೇಲಿನ ಹಲ್ಲೆ ಬಗ್ಗೆ ಪೊಲೀಸರಿಗೆ ದೂರು ನೀಡಲು ಸುರೇಶ್ ಹಿಂದೇಟು ಹಾಕಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ತನಿಖೆ ನಡೆಸಿದ ಹೆಣ್ಣೂರು ಪೊಲೀಸರು, ಸಂತ್ರಸ್ತನನ್ನು ಪತ್ತೆ ಹಚ್ಚಿ ಮಾಹಿತಿ ಕೋರಿದರು. ಆಗ ತನಗೆ ಪೊಲೀಸರಿಗೆ ದೂರು ನೀಡಿದರೆ ಕೊಲ್ಲುವುದಾಗಿ ಅಪರಿಚಿತರು ಬೆದರಿಸಿದ್ದರು. ಹೀಗಾಗಿ ನಾನು ದೂರು ನೀಡದೆ ಸುಮ್ಮನಾಗಿದ್ದೆ ಎಂದು ಸಂತ್ರಸ್ತ ಹೇಳಿ ಕಣ್ಣೀರಿಟ್ಟಿದ್ದಾನೆ.