ನಗರದ ವಿವಿಧೆಡೆ ದ್ವಿಚಕ್ರ ವಾಹನ, ಗ್ಯಾಸ್‌ ಸಿಲಿಂಡರ್‌ಗಳು, ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಇಬ್ಬರ ಬಂಧನ

| Published : Dec 07 2024, 01:30 AM IST / Updated: Dec 07 2024, 04:33 AM IST

ನಗರದ ವಿವಿಧೆಡೆ ದ್ವಿಚಕ್ರ ವಾಹನ, ಗ್ಯಾಸ್‌ ಸಿಲಿಂಡರ್‌ಗಳು, ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಇಬ್ಬರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ವಿವಿಧೆಡೆ ದ್ವಿಚಕ್ರ ವಾಹನ, ಗ್ಯಾಸ್‌ ಸಿಲಿಂಡರ್‌ಗಳು, ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು : ನಗರದ ವಿವಿಧೆಡೆ ದ್ವಿಚಕ್ರ ವಾಹನ, ಗ್ಯಾಸ್‌ ಸಿಲಿಂಡರ್‌ಗಳು, ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ತಿಲಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ.ನಗರದ ಬಫೂರ್‌ ಲೇಔಟ್‌ ನಿವಾಸಿ ಪರ್ವೀಜ್‌ ಖಾನ್‌ ಅಲಿಯಾಸ್‌ ಇಲಿಯಾಸ್‌ ಬಾಬಾ (27) ಮತ್ತು ಇಲಿಯಾಸ್‌ ನಗರ ನಿವಾಸಿ ಮೊಹಮ್ಮದ್‌ ಉಮರ್ ಶರೀಫ್‌ ಅಲಿಯಾಸ್‌ ದಾವುದ್‌(26) ಬಂಧಿತರು. ಆರೋಪಿಗಳಿಂದ ₹15 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳು, 40 ಗ್ಯಾಸ್‌ ಲಿಂಡರ್‌ಗಳು ಹಾಗೂ 28 ಬ್ಯಾಟರಿಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ತಿಲಕನಗರ ಹೊರವರ್ತುಲ ರಸ್ತೆಯ ಬಟ್ಟೆ ಅಂಗಡಿ ಹಿಂಭಾಗದಲ್ಲಿ ಅಳವಡಿಸಿದ್ದ ಆರು ಬ್ಯಾಟರಿಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ ನೇತೃತ್ವದಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ನ.27ರಂದು ಇಬ್ಬರು ವ್ಯಕ್ತಿಗಳನ್ನು ದ್ವಿಚಕ್ರ ವಾಹನ ಹಾಗೂ ಒಂದು ಬ್ಯಾಟರಿ ಸಹಿತ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕಳ್ಳತನದಲ್ಲಿ ಭಾಗಿ ಆಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಅಂತೆಯೇ ನಗರದ ವಿವಿಧೆಡೆ ದ್ವಿಚಕ್ರ ವಾಹನಗಳು, ಗ್ಯಾಸ್‌ ಸಿಲಿಂಡರ್‌ಗಳು ಹಾಗೂ ಬ್ಯಾಟರಿಗಳನ್ನು ಕಳವು ಮಾಡಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಆರೋಪಿಗಳು ವೃತ್ತಿಪರ ಕಳ್ಳರು: ಬಂಧಿತ ಆರೋಪಿಗಳು ವೃತ್ತಿಪರ ಕಳ್ಳರಾಗಿದ್ದಾರೆ. ಆರೋಪಿ ಪರ್ವೀಜ್‌ ಖಾನ್‌ ವಿರುದ್ಧ ಈ ಹಿಂದೆ ತಿಲಕನಗರ ಮತ್ತು ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಎರಡು ಅಪರಾಧ ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಮೊಹಮ್ಮದ್‌ ಉಮರ್ ಶರೀಫ್‌ ವಿರುದ್ಧ ಕೋಣನಕುಂಟೆ, ಜೆ.ಪಿ.ನಗರ ಹಾಗೂ ಕುಮಾರಸ್ವಾಮಿ ಲೇಔಟ್‌ ಠಾಣೆಯಲ್ಲಿ ಮೂರು ಅಪರಾಧ ಪ್ರಕರಣಗಳು ದಾಖಲಾಗಿವೆ. ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಕಳವು ಕೃತ್ಯಗಳಲ್ಲಿ ತೊಡಗಿದ್ದರು. ಈ ಹಿಂದೆ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಆರೋಪಿಗಳು ಜಾಮೀನು ಪಡೆದು ಹೊರಗೆ ಬಂದ ಬಳಿಕವೂ ತಮ್ಮ ಕಳವು ಚಾಳಿ ಮುಂದುವರೆಸಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಕದ್ದ ಮಾಲು ಮಾರಾಟ: ಆರೋಪಿಗಳು ಕದ್ದ ಮಾಲುಗಳನ್ನು ಪರಿಚಿತರ ಮೂಲಕ ಮಾರಾಟ ಮಾಡುತ್ತಿದ್ದರು. ಹೆಚ್ಚಿನ ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿ ಪರ್ವೀಜ್‌ ಖಾನ್‌ ಮನೆಯಿಂದ 14, ಗೊಟ್ಟಿಗೆರೆ 12, ಬೆಟ್ಟದಾಸನಪುರ 4, ದೇವನಹಳ್ಳಿಯಲ್ಲಿ 10 ಸೇರಿ ಒಟ್ಟು 40 ಗ್ಯಾಸ್‌ ಸಿಲಿಂಡರ್‌ ಜಪ್ತಿ ಮಾಡಲಾಗಿದೆ. ಅಂತೆಯೇ ಬಿಟಿಎಂ ಲೇಔಟ್‌ನ ಗುಜರಿ ಅಂಗಡಿಯಲ್ಲಿ 27 ಬ್ಯಾಟರಿಗಳು, ತಿಲಕನಗರ ಜಲಭವನ ಪಕ್ಕದ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 5 ದ್ವಿಚಕ್ರ ವಾಹನ ಹಾಗೂ ಕಾರ್ಪೊರೇಷನ್‌ ಲೇಔಟ್‌ನ ಖಾಲಿ ಜಾಗದಲ್ಲಿ ನಿಲುಗಡೆ ಮಾಡಿದ್ದ 5 ದ್ವಿಚಕ್ರ ವಾಹನ ಸೇರಿ ಒಟ್ಟು 10 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.

11 ಬೈಕ್‌ ಕಳವು ಪ್ರಕರಣ ಪತ್ತೆ: ಆರೋಪಿಗಳ ಬಂಧನದಿಂದ ತಿಲಕನಗರ ಬ್ಯಾಟರಿ ಕಳವು 2, ಜೆ.ಪಿ.ನಗರದ 2 ದ್ವಿಚಕ್ರ ವಾಹನ ಕಳವು, ಮಡಿವಾಳ, ಗಿರಿನಗರ, ಕೋಣನಕುಂಟೆ, ಮೈಕೋ ಲೇಔಟ್‌, ಬೊಮ್ಮನಹಳ್ಳಿ, ಕೆ.ಎಸ್‌.ಲೇಔಟ್‌, ಬೆಳ್ಳಂದೂರು, ಸಿದ್ದಾಪುರ, ಎಲೆಕ್ಟ್ರಾನಿಕ್‌ ಸಿಟಿ ತಲಾ ಒಂದು ಸೇರಿ ಒಟ್ಟು 11 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ. 40 ಗ್ಯಾಸ್‌ ಲಿಂಡರ್‌ಗಳು ಹಾಗೂ 26 ಬ್ಯಾಟರಿಗಳ ಮಾಲೀಕರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.