ಸಾರಾಂಶ
ದಾವಣಗೆರೆ : ಯುನೈಟೆಡ್ ಟೆಕ್ನಾಲಜಿ ಕಂಪನಿ ಹೆಸರಿನಲ್ಲಿ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ವ್ಯವಹಾರದ ಬಗ್ಗೆ ಟಿಪ್ಸ್ ನೀಡುವುದಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸುತ್ತಿದ್ದ ಬೆಂಗಳೂರು ಮೂಲದ ಇಬ್ಬರು ಆನ್ ಲೈನ್ ವಂಚಕರನ್ನು ಇಲ್ಲಿನ ಸಿಇಎನ್ ಅಪರಾಧ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಚೂಡಸಂದ್ರದ ರಾಜೀವ್ ನಗರದ ವಾಸಿ, ಲೈಫ್ ಸ್ಪೇಸಸ್ ಪ್ರೈವೇಟ್ ಲಿಮಿಟೆಡ್ ಕನ್‌ಟ್ರಕ್ಷನ್ಸ್ ಅಕೌಂಟೆಂಡ್ ಆದ ಆರ್.ಸಂದೀಪಕುಮಾರ ಹಾಗೂ ಚೂಡಸಂದ್ರ ಮೀನಾಕ್ಷಿ ಲೇಔಟ್‌ನ ವಾಸಿ, ಡಿಸ್ಟ್ರಿಬ್ಯೂಟರ್ ಎಲ್.ಮುರುಳಿ ಬಂಧಿತರು.
ದಾವಣಗೆರೆ ವೀರ ಮದಕರಿ ನಾಯಕ ವೃತ್ತದ ದಾವಲ್ ಪೇಟೆಯ ವಾಸಿ ರಾಜೇಶ ಎ.ಪಾಲನಕರ್ ಎಂಬುವರಿಗೆ ತಾವು ಯುನೈಟೆಡ್ ಟೆಕ್ನಾಲಜಿ ಕಂಪನಿಯಿಂದ ಕರೆ ಮಾಡುತ್ತಿದ್ದು, ನಿಮಗೆ ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಬ್ಯುಸಿನೆಸ್ ಮಾಡುವ ಆಸಕ್ತಿ ಇದ್ದರೆ ಕಂಪನಿ ಕಡೆಯಿಂದ ಕೆಲ ಟಿಪ್ಸ್ ನೀಡುವುದಾಗಿ ನಂಬಿಸಿದ್ದರು. ನಂತರ ತಾವು ಕೊಡುವ ಟಿಪ್ಸ್ ಬಳಸಿ, ನೀವು ಹೆಚ್ಚು ಲಾಭಾಂಶ ಗಳಿಸಬಹುದೆಂದು ನಂಬಿಸಿ, ₹30 ಸಾವಿರ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡಿದ್ದರು. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ರಾಜೇಶ ಪಾಲನಕರ ದೂರು ದಾಖಲಿಸಿದ್ದರು.
ಸಿಇಎನ್ ಪೊಲೀಸ್ ಠಾಣೆ ನಿರೀಕ್ಷಕ ಪಿ.ಪ್ರಸಾದ್, ಸಿಬ್ಬಂದಿ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದಂತೆ ಮತ್ತು ಮೊಬೈಲ್ ನಂಬರ್ ಗಳ ಮಾಹಿತಿ ಕಲೆ ಹಾಕಿ, ಆರೋಪಿಗಳನ್ನು ಬಂಧಿಸಿದ್ದಾರೆ.