ವಿಂಗ್ ಕಮಾಂಡರ್ ಬಂಧಿಸಿ: ವಿಕಾಸ್ ತಾಯಿ

| Published : Apr 23 2025, 02:03 AM IST

ಸಾರಾಂಶ

ವಿಂಗ್ ಕಮಾಂಡರ್‌ಗೂ ಸಾಮಾನ್ಯ ಜನರಿಗೆ ಒಂದೇ ಕಾನೂನಿರೋದು. ನನ್ನ ಮಗನ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್‌ನನ್ನು ಬಂಧಿಸಬೇಕು ಎಂದು ಹಲ್ಲೆಗೊಳಗಾದ ವಿಕಾಸ್ ಕುಮಾರ್ ತಾಯಿ ಜ್ಯೋತಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿಂಗ್ ಕಮಾಂಡರ್‌ಗೂ ಸಾಮಾನ್ಯ ಜನರಿಗೆ ಒಂದೇ ಕಾನೂನಿರೋದು. ನನ್ನ ಮಗನ ಮೇಲೆ ಹಲ್ಲೆ ನಡೆಸಿರುವ ವಿಂಗ್ ಕಮಾಂಡರ್‌ನನ್ನು ಬಂಧಿಸಬೇಕು ಎಂದು ಹಲ್ಲೆಗೊಳಗಾದ ವಿಕಾಸ್ ಕುಮಾರ್ ತಾಯಿ ಜ್ಯೋತಿ ಆಗ್ರಹಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಮಾಲೂರಿಗೆ ಜಾತ್ರೆಗೆ ಹೋಗಿ ಮರಳುವಾಗ ಬೆಳಗ್ಗೆ ಈ ಹಲ್ಲೆ ಘಟನೆ ನಡೆದಿದೆ ಎಂದರು.

ನಾನು ಮೊದಲು ಸಣ್ಣಪುಟ್ಟ ಗಲಾಟೆಗೆಲ್ಲ ಪೊಲೀಸರಿಗೆ ಏನೂ ದೂರು ಕೊಡುವುದು ಎಂದು ಮಗನಿಗೆ ಬುದ್ಧಿ ಮಾತು ಹೇಳಿದೆ. ಆದರೆ ನಮ್ಮ ಮನೆಗೆ ಸಂಜೆ 4.30 ಗಂಟೆಗೆ ಬಂದು ಮಗನನ್ನು ಪೊಲೀಸರು ಕರೆದುಕೊಂಡು ಹೋದರು. ವಿಂಗ್ ಕಮಾಂಡರ್ ಮೇಲೆ ಹಲ್ಲೆ ಆರೋಪ ಹೊರಿಸಲಾಯಿತು. ನನ್ನ ಮಗ ತಪ್ಪು ಮಾಡಿಲ್ಲ ಎಂದು ಜ್ಯೋತಿ ಹೇಳಿದರು.

ನನ್ನ ಮಗನ ಬೈಕ್‌ಗೆ ಕಮಾಂಡರ್ ಕಾರು ಟಚ್ ಆಗಿದೆ. ಮೊದಲು ಅವರ ಪತ್ನಿಯೇ ಗಲಾಟೆ ಮಾಡಿರೋದು. ಆ ಮೇಲೆ ನನ್ನ ಮಗನ ಮೇಲೆ ಕಮಾಂಡರ್ ಶಿಲಾದಿತ್ಯ ಹಲ್ಲೆ ನಡೆಸಿದ್ದಾರೆ. ನಾನು ಹಲ್ಲೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ನೋಡಿದಾಗ ಮನಸ್ಸಿಗೆ ಹೇಳಿಕೊಳ್ಳಲಾದಷ್ಟು ಸಂಕಟವಾಯಿತು ಎಂದು ಗದ್ಗಿತರಾಗಿ ನುಡಿದರು.

ನನ್ನ ಮಗ ಹಲ್ಲೆ ಮಾಡೇ ಇಲ್ಲ. ಕನ್ನಡ ಪರ ಸಂಘಟನೆಗಳು ನಮ್ಮ ನೆರವಿಗೆ ನಿಂತಿವೆ. ನನ್ನ ಮಗನಿಗೆ ಮನಬಂದಂತೆ ಥಳಿಸಿರುವ ವಿಂಗ್‌ ಕಮಾಂಡರ್ ಬಂಧನವಾಗಬೇಕು. ಆತನ ಮೇಲೆ ಮಾನಹಾನಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ಸಹ ಮುಂದುವರೆಸುತ್ತೇವೆ. ಕಮಾಂಡೋ ಆದ್ರೆ ಮನಸ್ಸಿಗೆ ಬಂದಂತೆ ಏನೂ ಬೇಕಾದರು ಮಾಡಬಹುದು? ಕಾನೂನು ಸಾಮಾನ್ಯ ಜನರಿಗೆ ಒಂದೇ ಕಮಾಂಡರ್‌ಗೂ ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದರು.---

----

ಹಲ್ಲೆಗೀಡಾದ ವಿಕಾಸ್‌ಗೆನೆರವು ಕೊಡುವೆ: ನಿಖಿಲ್‌ಕನ್ನಡಪ್ರಭ ವಾರ್ತೆ ಬೆಂಗಳೂರು ಕನ್ನಡಿಗನ ಮೇಲೆ ವಿಂಗ್‌ ಕಮಾಂಡರ್ ಹಲ್ಲೆ ಖಂಡನೀಯವಾಗಿದ್ದು, ಸ್ವೀಕಾರಾರ್ಹವಲ್ಲ. ಈ ಬಗ್ಗೆ ನ್ಯಾಯಯುತ ಮತ್ತು ಪಾರದರ್ಶಕವಾಗಿ ತನಿಖೆ ನಡೆಯಬೇಕು ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಸಿ.ವಿ. ರಾಮನ್ ನಗರದಲ್ಲಿ ವಾಹನ ತಗುಲಿದ ವಿಚಾರಕ್ಕೆ ಸಂಬಂಧಿಸಿದಂತೆ ಐಎಎಫ್ ವಿಂಗ್ ಕಮಾಂಡರ್‌ನಿಂದ ವಿಕಾಸ್ ಕುಮಾರ್ ಮೇಲೆ ಹಲ್ಲೆ ನಡೆಸಿರುವುದು ಸ್ವೀಕಾರಾರ್ಹವಲ್ಲ. ಇದನ್ನು ನಿಸ್ಸಂದೇಹವಾಗಿ ಖಂಡಿಸಬೇಕು. ಅಧಿಕಾರ ದುರುಪಯೋಗವನ್ನು ನಿರ್ಲಕ್ಷಿಸಲಾಗುವುದಿಲ್ಲ. ವಿಕಾಸ್ ಜತೆಗೆ ನಾವು ದೃಢವಾಗಿ ನಿಲ್ಲುತ್ತೇವೆ. ನ್ಯಾಯಯುತ ಮತ್ತು ಪಾರದರ್ಶಕ ತನಿಖೆಯ ಮೂಲಕ ನ್ಯಾಯ ಒದಗಿಸಬೇಕು. ವಿಕಾಸ್ ಕುಮಾರ್ ಅಥವಾ ಅವರ ಕುಟುಂಬದೊಂದಿಗೆ ನನ್ನನ್ನು ಸಂಪರ್ಕಿಸಲು ಯಾರಾದರೂ ಸಹಾಯ ಮಾಡಬಹುದಾದರೆ, ದಯವಿಟ್ಟು ಸಂದೇಶ ಕಳುಹಿಸಿದರೆ ಸಹಾಯ ಮಾಡಲು ಬಯಸುತ್ತೇನೆ ಎಂದು ಅವರು ಸಾಮಾಜಿಕ ಜಾಲತಾಣ ಮೂಲಕ ತಿಳಿಸಿದ್ದಾರೆ.