ಮತ್ತು ಬರಿಸುವ ಪಾನೀಯ ನೀಡಿ ಚಿನ್ನ ದೋಚುತ್ತಿದ್ದ ಗ್ಯಾಂಗ್‌ ಸೆರೆ

| Published : Mar 27 2024, 02:00 AM IST / Updated: Mar 27 2024, 11:41 AM IST

Thief New

ಸಾರಾಂಶ

ಜೋಧ್‌ಪುರ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬರುತ್ತಿದ್ದ ಡವರ್‌ ಲಾಲ್ ದಂಪತಿಗೆ ಮತ್ತು ಬರಿಸುವ ಮದ್ದು ನೀಡಿ ಚಿನ್ನಾಭರಣ ಕಳವು ಮಾಡಿದ್ದ ಗ್ಯಾಂಗ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೈಲುಗಳಲ್ಲಿ ಸಹ ಪ್ರಯಾಣಿಕರಿಗೆ ಮತ್ತು ಬರಿಸುವ ತಂಪು ಪಾನೀಯ ಕುಡಿಸಿ ಪ್ರಜ್ಞೆ ತಪ್ಪಿದ ಬಳಿಕ ಚಿನ್ನಾಭರಣ ದೋಚುತ್ತಿದ್ದ ಮೂವರನ್ನು ರೈಲ್ವೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ಮೂಲದ ಮೊಹಮ್ಮದ್‌ ಶೌಖತ್ ಅಲಿ, ಉತ್ತರಪ್ರದೇಶದ ಮಥುರಾ ಜಿಲ್ಲೆಯ ಮಹಮ್ಮದ್ ಸತ್ತರ್‌ ಅಲಿಯಾಸ್ ಅಜಾದ್ ಹಾಗೂ ಮೊಹಮ್ಮದ್ ಅವಧ್ ಬಂಧಿತರಾಗಿದ್ದು, ಆರೋಪಿಗಳಿಂದ 120 ಗ್ರಾಂ ಚಿನ್ನದ ಗಟ್ಟಿ ಜಪ್ತಿ ಮಾಡಲಾಗಿದೆ.

ಮೂರು ತಿಂಗಳ ಹಿಂದೆ ರಾಜಸ್ಥಾನದಿಂದ ಬೆಂಗಳೂರಿಗೆ ಜೋಧ್‌ಪುರ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬರುತ್ತಿದ್ದ ಡವರ್‌ ಲಾಲ್ ದಂಪತಿಗೆ ಮತ್ತು ಬರಿಸುವ ಮದ್ದು ನೀಡಿ ಚಿನ್ನಾಭರಣ ಕಳವು ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದರು ಎಂದು ರಾಜ್ಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಸ್‌.ಕೆ.ಸೌಮ್ಯಲತಾ ತಿಳಿಸಿದ್ದಾರೆ.

ಹೇಗೆ ಕಳ್ಳತನ?
ವೃತ್ತಿಪರ ಕ್ರಿಮಿನಲ್‌ಗಳಾಗಿರುವ ಈ ಮೂವರ ವಿರುದ್ಧ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಉತ್ತರ ಭಾರತದಿಂದ ಬೆಂಗಳೂರಿಗೆ ಬರುವ ರೈಲುಗಳೇ ಈ ತಂಡದ ಗುರಿ ಆಗಿದ್ದವು. 

ಕೊನೆ ಕ್ಷಣದಲ್ಲಿ ತತ್ಕಾಲ್‌ನಲ್ಲಿ ರೈಲು ಟಿಕೆಟ್‌ಗಳನ್ನು ಬುಕ್ ಮಾಡಿ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ಸಹ ಪ್ರಯಾಣಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. 

ಆಗಾಗ್ಗೆ ತಿನ್ನಲು ಕಿರುಕಲು ತಿಂಡಿ ಹಾಗೂ ತಂಪು ಪಾನೀಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆಗ ತಮ್ಮ ಬೋಗಿಯಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ ಬಳಿಕ ತಮ್ಮ ಕಳ್ಳತನ ಸಂಚು ಕಾರ್ಯರೂಪಕ್ಕಿಳಿಸುತ್ತಿದ್ದರು. 

ದಂಪತಿ ಇದ್ದರೆ ಅವರಿಗೆ ತಂಪು ಪಾನೀಯದಲ್ಲಿ ಮತ್ತು ಬರಿಸುವ ಮದ್ದು ಮಿಶ್ರಣ ಮಾಡಿಸಿ ಆರೋಪಿಗಳು ಕುಡಿಸುತ್ತಿದ್ದರು. ಸಂತ್ರಸ್ತರು ಪ್ರಜ್ಞೆ ತಪ್ಪಿದ ಕೂಡಲೇ ಅವರು ಧರಿಸಿದ್ದ ಚಿನ್ನಾಭರಣ ದೋಚಿ ಮಧ್ಯೆ ಸಿಗುವ ರೈಲ್ವೆ ನಿಲ್ದಾಣದಲ್ಲಿ ಇಳಿದು ಪರಾರಿಯಾಗುತ್ತಿದ್ದರು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಡಿಸೆಂಬರ್‌ 16ರಂದು ರಾಜಸ್ಥಾನದಿಂದ ಹೊರಟ ಜೋಧಪುರ ಎಕ್ಸ್‌ಪ್ರೆಸ್‌ ಅನ್ನು ಹತ್ತಿದ ಆರೋಪಿಗಳು, ಆ ಬೋಗಿಯಲ್ಲಿದ್ದ ಡವರ್‌ ಲಾಲ್ ದಂಪತಿಯನ್ನು ಪರಿಚಯಿಸಿಕೊಂಡಿದ್ದಾರೆ. 

ಬಳಿಕ ಚಿಕ್ಕಮಗಳೂರು ಜಿಲ್ಲೆ ಬೀರೂರು ಬಳಿ ದಂಪತಿಗೆ ಬಾದಾಮಿ ಹಾಲಿನಲ್ಲಿ ಮತ್ತು ಭರಿಸುವ ಮದ್ದು ಮಿಶ್ರಣ ಮಾಡಿ ಆರೋಪಿಗಳು ನೀಡಿದ್ದರು. 

ಈ ಹಾಲು ಸೇವಿಸಿದ ಪ್ರಜ್ಞೆ ತಪ್ಪಿದ ದಂಪತಿಯಿಂದ 120 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಯಶವಂತಪುರ ತಲುಪಿದ ಬಳಿಕವು ಅರೆ ಪ್ರಜ್ಞಾಹೀನರಾಗಿದ್ದ ಡವರ್ ಲಾಲ್ ದಂಪತಿಯನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದರು. ಈ ಬಗ್ಗೆ ಲಾಲ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದರು ಎಂದು ಎಸ್ಪಿ ತಿಳಿಸಿದರು.

ಮೊಬೈಲ್ ಸಂಖ್ಯೆಗಳ ನೀಡಿದ ಸುಳಿವು?

ಈ ಕೃತ್ಯದ ತನಿಖೆಗೆ ಎಸ್ಪಿ ಸೌಮ್ಯಲತಾ ನೇತೃತ್ವದಲ್ಲಿ ಡಿವೈಎಸ್ಪಿ ರವಿಕುಮಾರ್‌ ಹಾಗೂ ಮೈಸೂರು ರೈಲ್ವೆ ಠಾಣೆ ಇನ್‌ಸ್ಪೆಕ್ಟರ್ ಮಂಜು ಮತ್ತು ಅರಸೀಕೆರೆ ಠಾಣೆ ಪಿಎಸ್‌ಐ ಕಾಂತರಾಜು ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಲಾಯಿತು. 

ಅಂದು ಜೋಧ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ರಿಸರ್ವೇಷನ್‌ನಲ್ಲಿ ಪ್ರಯಣಿಸಿದ ಪ್ರಯಾಣಿಕರ ಬಗ್ಗೆ ಪೊಲೀಸರು ಮಾಹಿತಿ ಕೆದಕಿದರು. ಆಗ ತತ್ಕಾಲ್‌ನಲ್ಲಿ ಟಿಕೆಟ್ ಬುಕ್ ಮಾಡುವಾಗ ಆರೋಪಿಗಳು ನಕಲಿ ಮೊಬೈಲ್ ಸಂಖ್ಯೆ ಕೊಟ್ಟಿರುವುದು ಗೊತ್ತಾಯಿತು. 

ಈ ಮೊಬೈಲ್ ಸಂಖ್ಯೆಗಳನ್ನು ಆಧರಿಸಿ ತನಿಖೆಗೆ ಇಳಿದಾಗ ಕೊನೆಗೆ ಆರೋಪಿಗಳು ಸಿಕ್ಕಿಬಿದ್ದರು. ಮತ್ತೆ ರೈಲಿನಲ್ಲಿ ಕಳ್ಳತನಕ್ಕೆ ಹೊಂಚು ಹಾಕಿದ್ದಾಗಲೇ ಈ ಮೂವರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.