ಸಾರಾಂಶ
ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿದ್ದ ಕುಖ್ಯಾತ ರೌಡಿ ಸೇರಿ ನಾಲ್ವರು ಆರೋಪಿಗಳನ್ನು ರಾಜಗೋಪಾಲನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಜಗೋಪಾಲನಗರ ಠಾಣೆ ರೌಡಿ ಶೀಟರ್ ಮಣಿಕಂಠ ಅಲಿಯಾಸ್ ಕಳ್ಳಮಣಿ(22) ಅಜಯ್(21), ದೀಕ್ಷಿತ್(21) ಹಾಗೂ ಕೀರ್ತಿ(26) ಬಂಧಿತರು. ಆರೋಪಿಗಳಿಂದ ₹28.50 ಲಕ್ಷ ಮೌಲ್ಯದ 470 ಗ್ರಾಂ ಚಿನ್ನಾಭರಣ, 500 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ₹50 ಸಾವಿರ ಜಪ್ತಿ ಮಾಡಲಾಗಿದೆ.
ಆರೋಪಿಗಳು ಮಾ.5ರಂದು ಉತ್ತರಹಳ್ಳಿ ಸಮೀಪದ ಬಿಎಚ್‌ಸಿಎಸ್ ಲೇಔಟ್‌ನ ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದರು. ಈ ಸಂಬಂದ ಸುಬ್ರಮಣ್ಯಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಜ್ಯುವೆಲ್ಲರಿ ಅಂಗಡಿ ಬಳಿ ಅನುಮಾನಾಸ್ಪದ ಓಡಾಟ:
ಮಾ.27ರಂದು ಲಗ್ಗೆರೆ ಮುಖ್ಯರಸ್ತೆಯ ಜ್ಯುವೆಲ್ಲರಿ ಅಂಗಡಿಯೊಂದರ ಎದುರು ದೀಕ್ಷಿತ್ ಮತ್ತು ಅಜಯ್ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಇದನ್ನು ಗಮನಿಸಿರುವ ಗಸ್ತು ಪೊಲೀಸರು, ಇಬ್ಬರು ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ಒಬ್ಬನ ಪ್ಯಾಂಟ್ ಜೇಬಿನಲ್ಲಿ ಬೆಳ್ಳಿಯ ಕಾಲು ಚೈನು ಮತ್ತು ಮತ್ತೊಬ ಜೇಬಿನಲ್ಲಿ ಬೆಳ್ಳಿ ಉಡುದಾರ ಕಂಡು ಬಂದಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಸಮರ್ಪಕ ಉತ್ತರ ನೀಡಿಲ್ಲ. ಬಳಿಕ ಅನುಮಾನಗೊಂಡು ಇಬ್ಬರನ್ನು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ಮತ್ತಿಬ್ಬರು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.ರೌಡಿ ಶೀಟರ್ ಸೇರಿ ಮತ್ತಿಬ್ಬರ ಬಂಧನ
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ರೌಡಿ ಮಣಿಕಂಠ ಮತ್ತು ಕಳವು ಮಾಲು ಸ್ವೀಕರಿಸಿದ್ದ ಕೀರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿರುವ ವಿಚಾರ ಬಾಯ್ಬಿಟ್ಟಿದ್ದಾರೆ. ಬಳಿಕ ಪರಿಶೀಲನೆ ಮಾಡಿದಾಗ ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜ್ ಅವರ ಮನೆಯಲ್ಲೇ ಕಳ್ಳತನ ಆಗಿರುವುದು ಗೊತ್ತಾಗಿದೆ. ಬಳಿಕ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಕಳವು ಮಾಲುಗಳನ್ನು ಜಪ್ತಿ ಮಾಡಲಾಗಿದೆ.20 ಕಾರುಗಳ ಗಾಜು ಒಡೆದಿದ್ದ ರೌಡಿ ಮಣಿ
ಬಂಧಿತ ನಾಲ್ವರು ಆರೋಪಿಗಳ ಪೈಕಿ ರೌಡಿ ಮಣಿಕಂಠ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ. ಈತ ಇತ್ತೀಚೆಗೆ ಲಗ್ಗೆರೆಯಲ್ಲಿ ಹವಾ ಸೃಷ್ಟಿಸಲು ರಸ್ತೆ ಬದಿ ನಿಲುಗಡೆ ಮಾಡಿದ್ದ ಸುಮಾರು 20 ಕಾರುಗಳ ಗಾಜು ಒಡೆದು ಪುಂಡಾಟ ಮೆರೆದಿದ್ದ. ಈ ಪ್ರಕರಣದಲ್ಲಿ ರಾಜಗೋಪಾಲನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಹೊರಬಂದ ಬಳಿಕ ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕತ್ಯಗಳನ್ನು ಮುಂದುವರೆಸಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.