ಸಾರಾಂಶ
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ತಮ್ಮ ಬಾಸ್ ಸೂಚನೆ ಮೇರೆಗೆ ಡ್ರಗ್ಸ್ ದಂಧೆ ನಡೆಸುತ್ತಿದ್ದ ಬಿಎಸ್ಸಿ ಪದವೀಧರ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‌ನ ಮಹಮ್ಮದ್ ಫೈಯ್ಸಿ ಹಾಗೂ ನಾಗರಬಾವಿಯ ಗೌತಮ್ ಬಂಧಿತರಾಗಿದ್ದು, ಆರೋಪಿಗಳಿಂದ ಎಂಡಿಎಂಎ 15 ಗ್ರಾಂ, ಹಾಶೀಶ್ ಆಯಿಲ್ ಹಾಗೂ ಹೈಂಡ್ರೋ ಗಾಂಜಾ 505 ಗ್ರಾಂ ಸೇರಿದಂತೆ ₹71 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಕೆಲ ದಿನಗಳಿಂದ ನಗರದಲ್ಲಿ ಡ್ರಗ್ಸ್ ಜಾಲದಲ್ಲಿ ನಿರತರಾಗಿದ್ದ ಫೈಯ್ಸಿ ಹಾಗೂ ಗೌತಮ್ ಕುರಿತು ಬಾತ್ಮೀದಾರರ ಮೂಲಕ ಮಾಹಿತಿ ಸಿಕ್ಕಿತು. ಅಂತೆಯೇ ಕುಮಾರಸ್ವಾಮಿ ಲೇಔಟ್ ಸಮೀಪದ ಚಂದ್ರಾನಗರದಲ್ಲಿದ್ದ ಆರೋಪಿಗಳ ಮನೆ ಮೇಲೆ ಮೇಲೆ ದಾಳಿ ನಡೆಸಿ ಇನ್‌ಸ್ಪೆಕ್ಟರ್ ಮಹಮ್ಮದ್ ಮುಕ್ರಂ ನೇತೃತ್ವದ ತಂಡ ಬಂಧಿಸಿದೆ.
ಜೈಲಿನಿಂದಲೇ ಬಾಸ್ ಡೀಲ್: ಈ ಆರೋಪಿಗಳ ಪೈಕಿ ಫೈಯ್ಸಿ ಮೂಲತಃ ಕೇರಳ ರಾಜ್ಯದವನಾಗಿದ್ದು, ಬನಶಂಕರಿ ಸಮೀಪ ಮಾಲ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ. ಇನ್ನು ಬಿಎಸ್ಸಿ ಓದಿದ್ದ ಗೌತಮ್, ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಆದರೆ ಸುಲಭವಾಗಿ ಹಣ ಸಂಪಾದನೆಗೆ ಈ ಇಬ್ಬರು ಡ್ರಗ್ಸ್ ದಂಧೆಗಿಳಿದಿದ್ದರು.
ಕೆಲ ತಿಂಗಳ ಹಿಂದೆ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಗಳ ಬಾಸ್ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾನೆ. ಬಳಿಕ ಜೈಲಿನಿಂದ ಆತ ನೀಡುತ್ತಿದ್ದ ಸೂಚನೆ ಮೇರೆಗೆ ಕಳೆದ ಮೂರು ತಿಂಗಳಿಂದ ಫೈಯ್ಸಿ ಹಾಗೂ ಗೌತಮ್ ಡ್ರಗ್ಸ್ ದಂಧೆ ಮುಂದುವರೆಸಿದ್ದರು. ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತಂದು ನಗರದಲ್ಲಿ ದುಬಾರಿ ಬೆಲೆಗೆ ಇಬ್ಬರು ಮಾರುತ್ತಿದ್ದರು. ವಿಚಾರಣೆ ವೇಳೆ ಜೈಲಿನಲ್ಲಿರುವ ತಮ್ಮ ಬಾಸ್ ಕುರಿತು ಆರೋಪಿಗಳು ಬಾಯ್ಬಿಟ್ಟಿದ್ದು. ನ್ಯಾಯಾಲಯದ ಅನುಮತಿ ಪಡೆದು ಆತನನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಆರೋಪಿಗಳು ಕೂಡ ವೃತ್ತಿಪರ ಪೆಡ್ಲರ್‌ಗಳಾಗಿದ್ದು, ಈ ಹಿಂದೆ ಗೌತಮ್ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಡ್ರಗ್ಸ್ ಪ್ರಕರಣ ದಾಖಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊಡಿಗೇಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದ ಗಾಂಜಾ ಪೆಡ್ಲರ್ಸ್: ಕೊಡಿಗೇಹಳ್ಳಿ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಗಾಂಜಾ ಮಾರುತ್ತಿದ್ದ ನಾಲ್ವರು ಸಿಕ್ಕಿಬಿದ್ದಿದ್ದಾರೆ.
ಹೊರ ರಾಜ್ಯದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಆರೋಪಿಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಈ ನಾಲ್ವರಿಂದ ₹8.6 ಲಕ್ಷ ಮೌಲ್ಯದ 8.6 ಕೇಜಿ ಗಾಂಜಾ ಹಾಗೂ ಆಟೋ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.