ಹಾಡಹಗಲೇ ಸರಗಳ್ಳತನಕ್ಕೆ ಯತ್ನಿಸಿದ ಯುವಕನನ್ನು ಹಿಡಿದ ಸಾರ್ವಜನಿಕರು : ಗೂಸಾ ತಿಂದು ಪೊಲೀಸರ ಅತಿಥಿ

| Published : Aug 25 2024, 01:57 AM IST / Updated: Aug 25 2024, 04:26 AM IST

ಸಾರಾಂಶ

ಹಾಡಹಗಲೇ ಸರಗಳ್ಳತನಕ್ಕೆ ಯತ್ನಿಸಿದ ಯುವಕನನ್ನು ಹಿಡಿದ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

 ಕೆ.ಆರ್.ಪೇಟೆ : ಹಾಡಹಗಲೇ ಸರಗಳ್ಳತನಕ್ಕೆ ಯತ್ನಿಸಿದ ಯುವಕನನ್ನು ಹಿಡಿದ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ತಾಲೂಕಿನ ಕೃಷ್ಣಾಪುರ ಗ್ರಾಮದ ಶ್ರೀನಿವಾಸ (30) ಬಂಧಿತ ಯುವಕ. ಸಾರ್ವಜನಿಕರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾಗಿದ್ದಾನೆ.

ಪಟ್ಟಣದ ಹೇಮಗಿರಿ ರಸ್ತೆಯಲ್ಲಿ ವಾಸವಿರುವ ವಿಶ್ರಾಂತ ಎ.ಎಸ್.ಐ ಶೀಳನೆರೆ ಸೋಮಶೇಖರ್ ಅವರು ತಮ್ಮ ವಾಣಿಜ್ಯ ಮಳಿಗೆಯಲ್ಲಿ ನಡೆಸುತ್ತಿರುವ ಪ್ರಾವಿಜನ್ ಸ್ಟೋರ್‌ಗೆ ಟಿವಿಎಸ್ ಸ್ಕೂಟರ್‌ನಲ್ಲಿ ಬಂದ ಸರಗಳ್ಳ ಸಿಗರೇಟ್ ಕೇಳುವ ನೆಪದಲ್ಲಿ ಬಂದಿದ್ದಾನೆ.

ಅಂಗಡಿ ಬಳಿ ಯಾರೂ ಇಲ್ಲದ ಸಮಯ ನೋಡಿ ಏಕಾಏಕಿ ಅಂಗಡಿಯಲ್ಲಿದ್ದ ಮಹಿಳೆ ಕತ್ತಿನಲ್ಲಿದ್ದ 50 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಓಡಲು ಯತ್ನಿಸಿದ್ದಾನೆ. ಕೂಡಲೆ ಎಚ್ಚೆತ್ತ ಮಹಿಳೆ ಅಲ್ಲೇ ಇದ್ದ ಮಚ್ಚಿನಿಂದ ಸರಗಳ್ಳನ ಮೇಲೆ ಹಲ್ಲೆಗೆ ಯತ್ನಿಸಿದಾಗ ಅಲ್ಲಿಂದ ಯುವಕ ಕಾಲ್ಕಿತ್ತಿದ್ದಾನೆ. ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಸರಗಳ್ಳನನ್ನು ಹಿಡಿದು ಪಟ್ಟಣ ಪೋಲಿಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನವೀನ್ ಅವರಿಗೆ ಒಪ್ಪಿಸಿದ್ದಾರೆ.