2 ಬಿಎಂಟಿಸಿ ಬಸ್‌ಗಳ ನಡುವೆ ಸಿಲುಕಿ ಆಟೋ ನಜ್ಜುಗುಜ್ಜು : ಚಾಲಕ, ವೈದ್ಯ ಸ್ಥಳದಲ್ಲೇ ಸಾವು

| N/A | Published : Mar 01 2025, 01:01 AM IST / Updated: Mar 01 2025, 05:24 AM IST

ಸಾರಾಂಶ

ಬಿಎಂಟಿಸಿ ಬಸ್‌ನ ಹಿಂದೆ ಹೋಗುತ್ತಿದ್ದ ಆಟೋ ರಿಕ್ಷಾಗೆ ಹಿಂದಿನಿಂದ ಬಂದ ಮತ್ತೊಂದು ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬಸ್‌ಗಳ ನಡುವೆ ಸಿಲುಕಿ ಆಟೋ ಚಾಲಕ ಮತ್ತು ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

  ಬೆಂಗಳೂರು : ಬಿಎಂಟಿಸಿ ಬಸ್‌ನ ಹಿಂದೆ ಹೋಗುತ್ತಿದ್ದ ಆಟೋ ರಿಕ್ಷಾಗೆ ಹಿಂದಿನಿಂದ ಬಂದ ಮತ್ತೊಂದು ಬಿಎಂಟಿಸಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬಸ್‌ಗಳ ನಡುವೆ ಸಿಲುಕಿ ಆಟೋ ಚಾಲಕ ಮತ್ತು ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕೆ.ಪಿ.ಅಗ್ರಹಾರದ ಆಟೋ ಚಾಲಕ ಅನಿಲ್‌ ಕುಮಾರ್‌ (50) ಮತ್ತು ಹನುಮಂತನಗರದ ಪ್ರಯಾಣಿಕ ಡಾ। ವಿಷ್ಣು ಭಾಪಟ್‌ (80) ಮೃತರು. ಶುಕ್ರವಾರ ಬೆಳಗ್ಗೆ ಸುಮಾರು 11.30ಕ್ಕೆ ಹೊಸಕೆರೆಹಳ್ಳಿ ಕ್ರಾಸ್‌ನ 80 ಅಡಿ ರಸ್ತೆಯ ಸೀತಾ ಸರ್ಕಲ್‌ ಬಳಿ ಈ ದುರ್ಘಟನೆ ನಡೆದಿದೆ. ಘಟನೆ ಸಂಬಂಧ ಎರಡೂ ಬಿಎಂಟಿಸಿ ಬಸ್‌ಗಳ ಚಾಲಕರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ಆಟೋ ಚಾಲಕ ಅನಿಲ್ ಕುಮಾರ್‌ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೆ.ಪಿ.ಅಗ್ರಹಾರದಲ್ಲಿ ನೆಲೆಸಿದ್ದರು. ಮೃತ ಪ್ರಯಾಣಿಕ ವಿಷ್ಣು ಭಾಪಟ್‌ ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದು, ಕುಟುಂಬದೊಂದಿಗೆ ಹನುಮಂತನಗರದಲ್ಲಿ ವಾಸವಾಗಿದ್ದರು. ಶುಕ್ರವಾರ ಕಾರ್ಯ ನಿಮಿತ್ತ ವಿಷ್ಣು ಭಾಪಟ್‌ ಅವರು ಅನಿಲ್‌ ಕುಮಾರ್‌ ಅವರ ಆಟೋದಲ್ಲಿ ಹೊಸಕೆರೆಹಳ್ಳಿ ಕ್ರಾಸ್‌ನ 80 ಅಡಿ ರಸ್ತೆಯಿಂದ ಸೀತಾ ಸರ್ಕಲ್ ಕಡೆಗೆ ಬರುತ್ತಿದ್ದರು.

ಬಸ್‌ ನಡುವೆ ಆಟೋ ಸಿಲುಕಿ ನಜ್ಜುಗುಜ್ಜು:

ಇದೇ ಸಮಯಕ್ಕೆ ಮುಂದೆ ಚಲಿಸುತ್ತಿದ್ದ ಬಿಎಂಟಿಸಿ ಬಸ್‌ ಚಾಲಕ ದಿಢೀರ್‌ ಬ್ರೇಕ್‌ ಹಾಕಿ ವೇಗ ತಗ್ಗಿಸಿದ್ದಾನೆ. ಆಗ ಆಟೋ ಚಾಲಕ ಅನಿಲ್‌ ಸಹ ಆಟೋಗೆ ಬ್ರೇಕ್‌ ಹಾಕಿ ವೇಗ ತಗ್ಗಿಸಿದ್ದಾರೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್‌ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಮುಂದೆ ಹೋಗುತ್ತಿದ್ದ ಬಿಎಂಟಿಸಿ ನಡುವೆ ಆಟೋ ಸಿಲುಕಿ ನಜ್ಜುಗುಜ್ಜಾಗಿದೆ. ಸ್ಥಳದಲ್ಲೇ ಆಟೋ ಚಾಲಕ ಅನಿಲ್‌ ಮತ್ತು ಪ್ರಯಾಣಿಕ ವಿಷ್ಣು ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸಂಚಾರ ಪೊಲೀಸರು, ಮೃತದೇಹಗಳನ್ನು ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಅಪಘಾತದಲ್ಲಿ ನಜ್ಜುಗುಜ್ಜಾಗಿದ್ದ ಆಟೋ ರಿಕ್ಷಾ ಹಾಗೂ ಅಪಘಾತಕ್ಕೆ ಕಾರಣವಾದ ಬಿಎಂಟಿಸಿ ಬಸ್‌ಗಳನ್ನು ಜಪ್ತಿ ಮಾಡಿ ಠಾಣೆಗೆ ಸಾಗಿಸಿದರು. ಘಟನೆ ಸಂಬಂಧ ಇಬ್ಬರು ಬಿಎಂಟಿಸಿ ಬಸ್‌ ಚಾಲಕರನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಬನಶಂಕರಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.