ಹೆಣ್ಣು ಭ್ರೂಣ ಪತ್ತೆ ಕೇಸ್: ತನಿಖೆಗೆ ಸಹರಿಸದ ಸಂತ್ರಸ್ತರು
KannadaprabhaNewsNetwork | Published : Oct 31 2023, 01:16 AM IST / Updated: Oct 31 2023, 01:17 AM IST
ಹೆಣ್ಣು ಭ್ರೂಣ ಪತ್ತೆ ಕೇಸ್: ತನಿಖೆಗೆ ಸಹರಿಸದ ಸಂತ್ರಸ್ತರು
ಸಾರಾಂಶ
ಹೆಣ್ಣು ಶಿಶು ಪತ್ತೆ ಕೇಸ್: ತನಿಖೆಗೆ ಸಹಕರಿಸಿದ ಸಂತ್ರಸ್ತರುಮಂಡ್ಯದ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಸೆಂಟರ್ ಇಟ್ಟು ನಡೆದಿದ್ದ ದಂಧೆ, ತನಿಖೆಗೆ ಸವಾಲು
ಕನ್ನಡಪ್ರಭ ವಾರ್ತೆ ಬೆಂಗಳೂರು ಹೆಣ್ಣು ಭ್ರೂಣ ಲಿಂಗ ಪತ್ತೆ ಪ್ರಕರಣ ಸಂಬಂಧ ದಂಧೆಕೋರರಿಂದ ಪರೀಕ್ಷೆಗೆ ಒಳಗಾಗಿದ್ದ ಗರ್ಭಿಣಿಯರು ಅಸಹಕಾರ ವ್ಯಕ್ತಪಡಿಸುತ್ತಿರುವುದು ಈಗ ಬೈಯಪ್ಪನಹಳ್ಳಿ ಠಾಣೆ ಪೊಲೀಸರ ತನಿಖೆಗೆ ಸವಾಲಾಗಿ ಪರಿಣಮಿಸಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ಮುಖ್ಯರಸ್ತೆಯ ಆಲೆಮನೆಯಲ್ಲಿದ್ದ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸಿದಾಗ 6 ಗರ್ಭಿಣಿಯರು ಪತ್ತೆಯಾಗಿದ್ದರು. ಆ ದಿನ ಅವರಿಂದ ಹೇಳಿಕೆ ಪಡೆದು ಕಳುಹಿಸಲಾಯಿತು. ಆನಂತರ ತನಿಖೆ ವೇಳೆ 100ಕ್ಕೂ ಹೆಚ್ಚಿನ ಗರ್ಭಿಣಿಯರ ಮಾಹಿತಿ ಸಿಕ್ಕಿತು. ಇವರಲ್ಲಿ ಐದಾರು ಮಂದಿ ಮಾತ್ರ ವಿಚಾರಣೆಗೆ ಸ್ಪಂದಿಸಿದರು. ಇನ್ನುಳಿದ ಬಹುತೇಕರು ತನಿಖೆಗೆ ಅಸಹಕಾರ ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ. ಈ ಪ್ರಕರಣದ ತನಿಖೆಗೆ ಗರ್ಭಿಣಿಯರನ್ನು ಬಲವಂತವಾಗಿ ತನಿಖೆಗೆ ಒಳಪಡಿಸಲು ತಾಂತ್ರಿಕ ತೊಂದರೆಗಳಿವೆ. ಹೀಗಾಗಿ ಕೇವಲ ಮನವೊಲಿಸಿ ಹೇಳಿಕೆ ಪಡೆಯಲಾಗುತ್ತಿದೆ. ತಪ್ಪಿಸಿಕೊಂಡಿರುವ ಕೆಲವು ಪ್ರಮುಖ ಆರೋಪಿಗಳ ಬಂಧಿತರಾದರೆ ತನಿಖೆಗೆ ಮತ್ತಷ್ಟು ಬಲವಾದ ಪುರಾವೆಗಳು ಸಿಗಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನು ವಿಚಾರಣೆ ಸಂದರ್ಭದಲ್ಲಿ ಪ್ರಮುಖ ದಂಧೆಕೋರರಾದ ಶಿವಲಿಂಗೇಗೌಡ ಹಾಗೂ ವೀರೇಶ್ ಮಹತ್ವದ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ. ಈ ಮಾಹಿತಿ ಅನುಸಾರ ತನಿಖೆ ಮುಂದುವರೆದಿದ್ದು, ಈ ಜಾಲವು ವಿಸ್ತಾರವಾಗಿದೆ. ತನಿಖೆಯೂ ಸಹ ಸುದೀರ್ಘಾವಧಿಯಾಗಲಿದೆ. ವಿಚಾರಣೆ ಬಳಿಕ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. -ಬಾಕ್ಸ್- ಖಾತೆಗಳಲ್ಲಿ ದೊಡ್ಡ ಮೊತ್ತ ಇಲ್ಲ ಈ ಪ್ರಕರಣದ ಬಂಧಿತ ಆರು ಆರೋಪಿಗಳ ಹಣಕಾಸಿನ ಬಗ್ಗೆ ಜಾಲಾಡಲಾಯಿತು. ಆದರೆ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ದೊಡ್ಡ ಮೊತ್ತದ ಹಣ ಪತ್ತೆಯಾಗಿಲ್ಲ. ದಂಧೆಯಲ್ಲಿ ಸಂಪಾದಿಸಿದ್ದ ಹಣವನ್ನು ಮೋಜು ಮಾಡಿ ಕಳೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.