ಸಾರಾಂಶ
ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಸಂಬಂಧ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾಗೌಡ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿಯ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದ ಸಂಬಂಧ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಗೆಳತಿ ಪವಿತ್ರಾಗೌಡ ಸೇರಿದಂತೆ ಆರು ಆರೋಪಿಗಳ ಜಾಮೀನು ಅರ್ಜಿಯ ಭವಿಷ್ಯ ಸೋಮವಾರ ನಿರ್ಧಾರವಾಗಲಿದೆ.
ಕಳೆದ ವಾರ ದರ್ಶನ್ ಜಾಮೀನು ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, ಈಗಾಗಲೇ ತೀರ್ಪು ಕಾಯ್ದಿರಿಸಿರುವ ರವಿಶಂಕರ್, ಲಕ್ಷ್ಮಣ್, ನಾಗರಾಜ್ ಮತ್ತು ದೀಪಕ್ ಅವರ ಅರ್ಜಿಗಳ ತೀರ್ಪನ್ನು ಸಹ ಇದೇ ವೇಳೆ ಪ್ರಕಟಿಸಲಿದೆ.
ಜಾಮೀನು ನೀಡುವಂತೆ ದರ್ಶನ್ ಪರ ಹಿರಿಯ ನ್ಯಾಯವಾದಿ ಸಿ.ವಿ.ನಾಗೇಶ್ ಹಾಗೂ ಜಾಮೀನು ಅರ್ಜಿ ತಿರಸ್ಕರಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು ಪ್ರಬಲ ವಾದ ಮಂಡಿಸಿದ್ದಾರೆ.
ಪೊಲೀಸ್ ತನಿಖೆಯಲ್ಲಿ ಹಲವಾರು ಲೋಪ ದೋಷಗಳಿವೆ ಎಂದು ಹಲವು ಅಂಶಗಳನ್ನು ಹಿರಿಯ ವಕೀಲ ಸಿ.ವಿ.ನಾಗೇಶ್ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಪೊಲೀಸರು ಸಾಂದರ್ಭಿಕ ಸಾಕ್ಷಿಗಳನ್ನು ಸೃಷ್ಟಿಸಿದ್ದಾರೆ. ಅರೇಬಿಯನ್ ನೈಟ್ಸ್ ಕತೆಯಂತೆ ಇದೆ. ಪೊಲೀಸರ ತನಿಖೆ ಅತ್ಯಂತ ಕಳಪೆಯಾಗಿದೆ. ಸ್ಥಳ ಮಹಜರು ಮತ್ತು ಪಂಚನಾಮೆಗೆ ಹೋಲಿಕೆಯೇ ಆಗುತ್ತಿಲ್ಲ ಎಂದು ವಾದಿಸಿದ್ದರು.
ಮತ್ತೊಂದೆಡೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಈ ಕೊಲೆ ಪ್ರಕರಣ ಅರೇಬಿಯನ್ ನೈಟ್ಸ್ ಕತೆಯಲ್ಲೂ ಇಲ್ಲದ ಕ್ರೂರವಾದ ರಕ್ತ ಚರಿತ್ರೆಯಾಗಿದೆ. ಆರೋಪಿಗಳ ವಿರುದ್ಧ ಪ್ರಬಲವಾದ ಸಾಕ್ಷ್ಯಾಧಾರಗಳು ಇವೆ. ರಕ್ತದ ಸ್ಯಾಂಪಲ್‌ಗಳ ವರದಿಗಳು, ಫೋನ್ ಕಾಲ್ ಡಿಟೇಲ್, ಕೃತ್ಯಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಗಳು, ಫೋಟೋಗಳು ಇವೆ. ರೇಣುಕಾಸ್ವಾಮಿ ಅಪಹರಣ, ಕೊಲೆ, ಶವ ವಿಲೇವಾರಿಗೆ ಬಳಸಿದ್ದ ವಾಹನಗಳು, ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೂಲಕ ಖಚಿತಪಡಿಸಲಾಗಿದೆ. ಆರೋಪಿ ದರ್ಶನ್ ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಪ್ರಬಲ ಸಾಕ್ಷಿಗಳಿವೆ ಎಂದು ವಾದಿಸಿದ್ದರು.
ಜಾಮೀನು ಸಿಗದಿದ್ದರೆ ಹೈಕೋರ್ಟ್‌ಗೆ ಅರ್ಜಿ?
ಒಂದು ವೇಳೆ ದರ್ಶನ್ ಮತ್ತು ಪವಿತ್ರಾಗೌಡ ಅವರ ಜಾಮೀನು ಅರ್ಜಿ ತಿರಸ್ಕರಿಸಿದರೆ ಅವರಿಬ್ಬರೂ ಹೈಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ.