ಸಾರಾಂಶ
ಅಪಘಾತದಿಂದ ರೊಚ್ಚಿಗೆದ್ದ ಕೋಡಿಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಗಳ ದ್ವಿಚಕ್ರ ವಾಹನ ಚಾಲಕರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ಡುಬ್ಬ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಮದ್ದೂರು : ಕಾರು ಬೈಕ್‌ಗೆ ಡಿಕ್ಕಿಯಾಗಿ ಖಾಸಗಿ ಕಾಲೇಜಿನ ಉಪನ್ಯಾಸಕರಿಬ್ಬರು ಗಾಯಗೊಂಡಿರುವ ಘಟನೆ ಪಟ್ಟಣದ ಹೊರ ವಲಯದ ಕೆ.ಕೋಡಿಹಳ್ಳಿ ಬಳಿ ಭಾನುವಾರ ಬೆಳಗ್ಗೆ ಜರುಗಿದೆ.
ಅಪಘಾತದಲ್ಲಿ ಖಾಸಗಿ ಕಾಲೇಜಿನ ಉಪನ್ಯಾಸಕ ಬೈಕ್ ಚಾಲನೆ ಮಾಡುತ್ತಿದ್ದ ಫಣೀಂದ್ರ ಹಾಗೂ ಆತನ ಸ್ನೇಹಿತ ನಾಗೇಶ್‌ಗೌಡ ಗಾಯಗೊಂಡಿದ್ದಾರೆ. ಇಬ್ಬರೂ ಸ್ನೇಹಿತನ ನಿಶ್ಚಿತಾರ್ಥಕ್ಕಾಗಿ ಮೈಸೂರಿಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟಯೋಟಾ ಕ್ವಾಲಿಸ್ ಕಾರು ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಗಾಯಾಳುಗಳು ಮದ್ದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಿಂದ ರೊಚ್ಚಿಗೆದ್ದ ಕೋಡಿಹಳ್ಳಿ ಮತ್ತು ಅಕ್ಕಪಕ್ಕದ ಗ್ರಾಮಗಳ ದ್ವಿಚಕ್ರ ವಾಹನ ಚಾಲಕರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಸ್ತೆ ಡುಬ್ಬ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಮೈಸೂರು ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.
ಸ್ಥಳಕ್ಕೆ ಧಾವಿಸಿದ ಪೊಲೀಸರು ಕ್ರೈನ್ ಸಹಾಯದಿಂದ ಅಪಘಾತಕ್ಕೊಳಗಾಗಿದ್ದ ವಾಹನಗಳನ್ನು ಠಾಣೆಗೆ ಸಾಗಿಸಿದರು. ಈ ಸಂಬಂಧ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಸಾವು
ಮೈಸೂರು:ಎರಡು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಚಾಲನೆಯಲ್ಲಿ ನಿಯಂತ್ರಣ ಕಳೆದುಕೊಂಡು ಬೈಕ್ ಸವಾರ ರಸ್ತೆ ಬದಿಯ ಪುಟ್ ಪಾತ್ ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಮೈಸೂರು- ಹುಣಸೂರು ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹದ ಬಳಿ ಶನಿವಾರ ರಾತ್ರಿ ನಡೆದಿದೆ.ಪಡುವಾರಹಳ್ಳಿ ನಿವಾಸಿ ಸಿ.ಕೆ. ರೇಣುಕುಮಾರ್ (40) ಎಂಬವರೇ ಮೃತಪಟ್ಟವರು. ಇವರು ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದ.
ಈ ಸಂಬಂಧ ವಿ.ವಿ. ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬೈಕಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಸವಾರ ಮೃತಪಟ್ಟಿರುವ ಘಟನೆ ನಗರದ ದಟ್ಟಗಳ್ಳಿಯ ಹೊರ ವರ್ತುಲ ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ. ಮೈಸೂರು ತಾಲೂಕು ಚಿಕ್ಕೇಗೌಡನಹುಂಡಿ ನಿವಾಸಿ ಮಂಜುನಾಥ್ (27) ಎಂಬವರೇ ಮೃತಪಟ್ಟವರು.
ಇವರು ಬೈಕಿನಲ್ಲಿ ಸ್ನೇಹಿತೆಯೊಂದಿಗೆ ತೆರಳುತ್ತಿದ್ದಾಗ ಮುಂದೆ ತೆರಳುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಿಂಬದಿ ಸವಾರರು ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಕೆ.ಆರ್. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.