ಬೆಂಗಳೂರು : ಚಡ್ಡಿ ಧರಿಸಿದ್ದ ವಿಚಾರವಾಗಿ ನಡೆದ ಜಗಳ : ಹಲ್ಲೆಗೈದು ತಂದೆಯನ್ನೇ ಕೊಂದ ಮಗ!

| Published : Oct 14 2024, 01:21 AM IST / Updated: Oct 14 2024, 05:31 AM IST

ಬೆಂಗಳೂರು : ಚಡ್ಡಿ ಧರಿಸಿದ್ದ ವಿಚಾರವಾಗಿ ನಡೆದ ಜಗಳ : ಹಲ್ಲೆಗೈದು ತಂದೆಯನ್ನೇ ಕೊಂದ ಮಗ!
Share this Article
  • FB
  • TW
  • Linkdin
  • Email

ಸಾರಾಂಶ

ಚಡ್ಡಿ ಧರಿಸಿದ್ದ ವಿಚಾರವಾಗಿ ನಡೆದ ಜಗಳದ ವೇಳೆ ತಂದೆ ಮೇಲೆಯೇ ಕುಡುಕ ಮಗ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ನಡೆದಿದೆ. ಬನ್ನೇರುಘಟ್ಟದ ಜನತಾ ಕಾಲೋನಿ ನಿವಾಸಿ ವೇಲಾಯುದನ್‌(76) ಕೊಲೆಯಾದ ದುರ್ದೈವಿ. ವಿನೋದ್‌ಕುಮಾರ್‌ (42) ಆರೋಪಿ.

 ಬೆಂಗಳೂರು : ಚಡ್ಡಿ ಧರಿಸಿದ್ದ ವಿಚಾರವಾಗಿ ನಡೆದ ಜಗಳದ ವೇಳೆ ತಂದೆ ಮೇಲೆಯೇ ಕುಡುಕ ಮಗ ಹಲ್ಲೆಗೈದು ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಬನ್ನೇರುಘಟ್ಟದ ಜನತಾ ಕಾಲೋನಿಯಲ್ಲಿ ನಡೆದಿದೆ. ಬನ್ನೇರುಘಟ್ಟದ ಜನತಾ ಕಾಲೋನಿ ನಿವಾಸಿ ವೇಲಾಯುದನ್‌(76) ಕೊಲೆಯಾದ ದುರ್ದೈವಿ. ವಿನೋದ್‌ಕುಮಾರ್‌ (42) ಆರೋಪಿ.

ಕೇರಳದ ಏರಿಮಲೆ ಮೂಲದ ವೇಲಾಯುದನ್‌ ಕುಟುಂಬ ಹಲವು ವರ್ಷಗಳಿಂದ ಜನತಾ ಕಾಲೋನಿಯಲ್ಲಿ ನೆಲೆಸಿದೆ. ವೇಲಾಯುದನ್‌ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಮಗ ವಿನೋದ್‌ ಕುಮಾರ್‌ ಮದ್ಯ ವ್ಯಸನಿಯಾಗಿದ್ದು, ಗ್ರಾನೈಟ್‌ ವ್ಯವಹಾರ ಮಾಡುತ್ತಿದ್ದ. ವೇಲಾಯುದನ್‌ ಮನೆಯಲ್ಲೇ ಹೆಚ್ಚು ಇರುತ್ತಿದ್ದರಿಂದ ಚಡ್ಡಿ ಹಾಕಿಕೊಂಡು ಓಡಾಡುತ್ತಿದ್ದರು. ಚಡ್ಡಿ ಮೇಲೆ ಪಂಚೆ ಧರಿಸುವಂತೆ ವಿನೋದ್‌ ಕುಮಾರ್‌ ಹಲವು ಬಾರಿ ಹೇಳಿದ್ದ ಎನ್ನಲಾಗಿದೆ.

ಚಡ್ಡಿ ವಿಚಾರಕ್ಕೆ ಜಗಳ ತೆಗೆದು ಕೊಲೆ: ಶನಿವಾರ ರಾತ್ರಿ ವೇಲಾಯುದನ್‌ ಮನೆಯಲ್ಲಿ ಚಡ್ಡಿ ಧರಿಸಿದ್ದರು. ಪಾನಮತ್ತನಾಗಿ ಮನೆಗೆ ಬಂದ ವಿನೋದ್‌ ಕುಮಾರ್‌, ಚಡ್ಡಿ ವಿಚಾರ ಪ್ರಸ್ತಾಪಿಸಿ ತಂದೆ ಜತೆಗೆ ಜಗಳ ತೆಗೆದಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿ ಏಕಾಏಕಿ ಅವರ ಮೇಲೆ ಕೈಗಳಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಲೆಯನ್ನು ಹಿಡಿದು ಜೋರಾಗಿ ಗೋಡೆಗೆ ಗುದ್ದಿಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ವೇಲಾಯುದನ್‌ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬಳಿಕ ಆರೋಪಿ ವಿನೋದ್‌ ಕುಮಾರ್‌ ಮನೆಯಿಂದ ಪರಾರಿಯಾಗಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಳಿಕ ಗಲಾಟೆ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿಯ ವಿನೋದ್‌ ಕುಮಾರ್‌ನನ್ನು ಬಂಧಿಸಿದ್ದಾರೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.