ಹಣಕಾಸು ವಿಚಾರಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣ: 6 ಮಂದಿ ಬಂಧನ

| Published : Aug 27 2024, 01:34 AM IST / Updated: Aug 27 2024, 04:39 AM IST

Money Saving Tips

ಸಾರಾಂಶ

ಇತ್ತೀಚೆಗೆ ಹಣಕಾಸು ವಿಚಾರಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ 6 ಮಂದಿ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಇತ್ತೀಚೆಗೆ ಹಣಕಾಸು ವಿಚಾರಕ್ಕೆ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣ ಸಂಬಂಧ 6 ಮಂದಿ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಿಂಗರಾಜಪುರ ನಿವಾಸಿಗಳಾದ ಮೆಹಬೂಬ್‌ ಪಾಷಾ(48), ಫೈರೋಜ್ ಪಾಷಾ(48), ನಿಜಾರ್‌ ಪಾಷಾ(48), ರಜಾಕ್‌ ಪಾಷಾ(40), ನಫೀಜ್‌(38), ಮನ್ಸೂರ್‌(34) ಬಂಧಿತರು. ಆರೋಪಿಗಳು ಆ.24ರಂದು ರಾತ್ರಿ ಸುಮಾರು 8.30ಕ್ಕೆ ಲಿಂಗರಾಜಪುರದ ಆಯಿಲ್‌ ಮಿಲ್ ರಸ್ತೆಯಲ್ಲಿ ಜುಹೇಬ್‌(30) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಮರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?

ಕಮ್ಮನಹಳ್ಳಿ ನಿವಾಸಿಯಾದ ಜುಹೇಬ್‌ ಮತ್ತು ದಾವೂದ್‌ ಸ್ನೇಹಿತರು. ಜುಹೇಬ್‌ಗೆ ದಾವೂದ್‌ನ ಸಹೋದರ ಜಿಶಾನ್‌ 1.70 ಲಕ್ಷ ರು. ಹಣ ನೀಡಬೇಕಿತ್ತು. ಈ ಹಣ ವಾಪಸ್ ನೀಡುವಂತೆ ಜುಹೇಬ್‌, ಜಿಶಾನ್‌ನನ್ನು ಹಲವು ಬಾರಿ ಕೇಳಿದರೂ ಕೊಟ್ಟಿರಲಿಲ್ಲ. ಜುಹೇಬ್‌ ಹಣ ವಾಪಸ್‌ ಕೇಳಿದ್ದಕ್ಕೆ ದಾವೂದ್‌ ಹಾಗೂ ಜಿಶಾನ್‌ ಕೋಪಗೊಂಡಿದ್ದರು.

ಜುಹೇಬ್‌ ಆ.24ರಂದು ರಾತ್ರಿ ಲಿಂಗರಾಜಪುರದ ಆಯಿಲ್‌ ಮಿಲ್‌ ರಸ್ತೆಯಲ್ಲಿ ಹೋಗುತ್ತಿದ್ದ. ಈ ವೇಳೆ ಆರೋಪಿಗಳಾದ ದಾವೂದ್‌, ಜಿಶಾನ್‌ ಹಾಗೂ ಸಚಹರರು ಜುಹೇಬ್‌ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದರು. ಬಳಿಕ ಕಾರಿನಲ್ಲಿ ಕೂರಿಸಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮಾರ್ಕೆಟ್‌ ಬಳಿ ಜುಹೇಬ್‌ನನ್ನು ಎಸೆದು ಹೋಗಿದ್ದರು. ಬಳಿಕ ಸ್ಥಳೀಯರು ಜುಹೇಬ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಬಾಣಸವಾಡಿ ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.