ಸಾರಾಂಶ
: ಇತ್ತೀಚೆಗೆ ಸಿಗರೆಟ್ ಡೆಲಿವೆರಿ ಬಾಯ್‌ನನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ
ಬೆಂಗಳೂರು : ಇತ್ತೀಚೆಗೆ ಸಿಗರೆಟ್ ಡೆಲಿವೆರಿ ಬಾಯ್‌ನನ್ನು ಅಡ್ಡಗಟ್ಟಿ ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.ಜೆ.ಹಳ್ಳಿ ನಿವಾಸಿಗಳಾದ ಅಲ್ಲಾಭಕ್ಷ್ (25) ಮತ್ತು ಮೊಹಮ್ಮದ್ ತೌಸಿಫ್ (24) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್ ಹಾಗೂ 1000 ರು. ನಗದನ್ನು ಜಪ್ತಿ ಮಾಡಲಾಗಿದೆ.
ಜು.8 ಸಿಗರೆಟ್ ಡೆಲಿವರಿ ಬಾಯ್ ಅಂಗಡಿಗಳಿಗೆ ಸಿಗರೆಟ್ ಡೆಲಿವರಿ ನೀಡಿ ಹಣ ತೆಗೆದುಕೊಂಡು ವರ್ತೂರಿನ ತಿಗಳರ ಬೀದಿಯಲ್ಲಿ ಹೋಗುತ್ತಿದ್ದ ವೇಳೆ ಮೂವರು ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ 30000 ರು. ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಘಟನಾ ಸ್ಥಳದ ಸುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆ.17 ಡಿ.ಜೆ.ಹಳ್ಳಿಯ ಮೋದಿ ರಸ್ತೆ ಬಳಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ತಾವೇ ಸುಲಿಗೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ 1000 ರು. ನಗದು ಜಪ್ತಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಯು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳು ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಅಡ್ಡಗಟ್ಟಿ ಬೆದರಿಸಿ ಸುಲಿಗೆ ಮಾಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಸುಲಿಗೆ ಘಟನೆ ಕಂಡುಬಂದಲ್ಲಿ ದೂರು ನೀಡಿ
ಈ ರೀತಿಯ ಸುಲಿಗೆ ಘಟನೆಗಳು ಕಂಡು ಬಂದಲ್ಲಿ ವೈಟ್‌ಫೀಲ್ಡ್ ವಿಭಾಗದ ಡಿಸಿಪಿ(9480801084), ಅಥವಾ ಮಾರತಹಳ್ಳಿ ಉಪವಿಭಾಗದ ಎಸಿಪಿ (9480801076) ಅಥವಾ ವರ್ತೂರು ಠಾಣೆ ಇನ್ಸ್‌ಪೆಕ್ಟರ್ (9480801618) ಅವರನ್ನು ನೇರವಾಗಿ ಸಂಪರ್ಕಿಸಿ ದೂರು ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.