ಬ್ಯಾಂಕ್ ಆಫ್ ಬರೋಡಾ ಬಿಸಿನೆಸ್ ಕರೆಸ್ಟಾಂಡೆಂಟ್‌ನಿಂದ ವೃದ್ಧನಿಗೆ ವಂಚನೆ

| Published : Mar 26 2025, 01:31 AM IST

ಸಾರಾಂಶ

ವೃದ್ಧ ರಂಗಣ್ಣ ಅವರ ಆಧಾರ್ ನಂಬರ್ ಮೂಲಕ ಹೆಬ್ಬೆಟ್ಟಿನಿಂದ 2400 ರು. ಹಣ ಡ್ರಾ ಮಾಡಿಕೊಂಡು ಕೇವಲ ಒಂದು ತಿಂಗಳ 1200 ರು. ಮಾತ್ರ ಬಂದಿದೆ. ನಾಳೆ ಬನ್ನಿ ಬ್ಯಾಂಕ್‌ನಿಂದ ಡ್ರಾ ಮಾಡಿ ನಿಮಗೆ ಕೊಡುತ್ತೇನೆ ಎಂದು ಹೇಳಿದ್ದಾನೆ. ಗ್ರಾಮದ ಇತರರಿಗೆ ಎರಡು ತಿಂಗಳ ಹಣ ಬಂದಿದೆ. ನನಗೂ ಬಂದಿರಬಹುದು ಸರಿಯಾಗಿ ನೋಡಿ ಎಂದು ಕೇಳಿಕೊಂಡರೂ ನಿಮ್ಮ ಬಳಿ ಕೇವಲ 1200 ರು. ಮಾತ್ರ ಇದೆ ಎಂದು ಕೊಟ್ಟು ಕಳುಹಿಸಿದ್ದಾನೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಅನಕ್ಷರಸ್ಥ ವ್ಯಕ್ತಿ ಖಾತೆಯಿಂದ ಬ್ಯಾಂಕ್ ಆಫ್ ಬರೋಡಾದ ಬಿಸಿನೆಸ್ ಕರೆಸ್ಟಾಂಡೆಂಟ್‌ (ಬಿಸಿ) ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.

ತಾಲೂಕಿನ ಚಂದಗಾಲು ಗ್ರಾಮದ 76 ವರ್ಷದ ವೃದ್ಧ ರಂಗಣ್ಣ ಸೋಮವಾರ ಮೇಳಾಪುರ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಬಿಸಿನೆಸ್ ಕರೆಸ್ಟಾಂಡೆಂಟ್‌ ಯೋಗಾನಂದರ ಬಳಿ ತೆರಳಿ ಕಳೆದ 2 ತಿಂಗಳ ವೃದ್ಯಾಪ್ಯ ವೇತನ ಬಂದಿದೆ ಅದನ್ನು ಖಾತೆಯಿಂದ ತೆಗೆದುಕೊಡುವಂತೆ ತಮ್ಮ ಆಧಾರ್ ಕಾರ್ಡ್ ನೀಡಿದ್ದಾರೆ.

ವೃದ್ಧ ರಂಗಣ್ಣ ಅವರ ಆಧಾರ್ ನಂಬರ್ ಮೂಲಕ ಹೆಬ್ಬೆಟ್ಟಿನಿಂದ 2400 ರು. ಹಣ ಡ್ರಾ ಮಾಡಿಕೊಂಡು ಕೇವಲ ಒಂದು ತಿಂಗಳ 1200 ರು. ಮಾತ್ರ ಬಂದಿದೆ. ನಾಳೆ ಬನ್ನಿ ಬ್ಯಾಂಕ್‌ನಿಂದ ಡ್ರಾ ಮಾಡಿ ನಿಮಗೆ ಕೊಡುತ್ತೇನೆ ಎಂದು ಹೇಳಿದ್ದಾನೆ. ಗ್ರಾಮದ ಇತರರಿಗೆ ಎರಡು ತಿಂಗಳ ಹಣ ಬಂದಿದೆ. ನನಗೂ ಬಂದಿರಬಹುದು ಸರಿಯಾಗಿ ನೋಡಿ ಎಂದು ಕೇಳಿಕೊಂಡರೂ ನಿಮ್ಮ ಬಳಿ ಕೇವಲ 1200 ರು. ಮಾತ್ರ ಇದೆ ಎಂದು ಕೊಟ್ಟು ಕಳುಹಿಸಿದ್ದಾನೆ.

ಅನುಮಾನಗೊಂಡು ಮಂಗಳವಾರ ಬಾಬುರಾಯನಕೊಪ್ಪಲು ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ತೆರಳಿ ಪರಿಶೀಲಿಸಿದ ವೇಳೆ ರಂಗಣ್ಣರ ಖಾತೆಯಿಂದ 2400 ರು. ಡ್ರಾ ಆಗಿರುವುದು ಕಂಡು ಬಂದಿದೆ. ಈ ವೇಳೆ ಕೋಪಗೊಂಡು ಬ್ಯಾಂಕ್ ಸಿಬ್ಬಂದಿ ವಿರುದ್ಧ ಅಸಮಧಾನ ಹೊರಹಾಕುತ್ತಿದ್ದಂತೆ ನಿಮ್ಮಿಂದ ಯಾರು ಹಣ ಡ್ರಾ ಮಾಡಿದ್ದಾರೆ ಅವರನ್ನು ಕೇಳಿಕೊಳ್ಳಿ ಎಂದು ಹಾರಿಕೆ ಉತ್ತರ ನೀಡಿ ಕಳುಹಿಸಿದ್ದಾರೆ.

ದಿಕ್ಕು ಕಾಣದ ರಂಗಣ್ಣ ಮಾಧ್ಯಮದವರನ್ನು ಸಂಪರ್ಕಿಸಿ ಗ್ರಾಮದ ವೃದ್ಧರು, ಅಂಗವಿಕಲರು ಸೇರಿದಂತೆ ವಿಧವಾ ವೇತನ ಪಡೆಯುವ ಮಹಿಳೆಯರಿಗೆ ವಂಚಿಸುತ್ತಿರುವುದಾಗಿ ಆರೋಪಿಸಿದರು.

ಈ ವೇಳೆ ದೂರವಾಣಿ ಮೂಲಕ ಮಾಧ್ಯಮದವರು ಯೋಗಾನಂದನನ್ನು ಸಂಪರ್ಕಿಸಿ ವೃದ್ಧರಿಗೆ ವಂಚನೆಯಾಗಿರುವ ಉಳಿಕೆ ಹಣ ನೀಡದಿದ್ದರೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ ನಂತರ ತಪ್ಪಾಗಿರುವುದಾಗಿ ಒಪ್ಪಿಕೊಂಡು ಹಣ ಹಿಂದಿರುಗಿಸಿರುವುದಾಗಿ ತಿಳಿದು ಬಂದಿದೆ.

ಈ ಸಂಬಂಧ ರೈತ ಹೋರಾಟಗಾರ ಕಿರಂಗೂರು ಪಾಪು ಪ್ರತಿಕ್ರಿಯಿಸಿ, ಬ್ಯಾಂಕ್ ಸಿಬ್ಬಂದಿ ನೇರವಾಗಿ ಫಲಾನುಭವಿಗಳಿಗೆ ಹಣ ನೀಡದೆ ಏಜೆಂಟ್‌ಗಳ ಮೂಲಕ ತಿಂಗಳ ಮಾಶಾಸನ ನೀಡಲು ಮುಂದಾಗಿವೆ. ಏಜೆಂಟ್‌ಗಳು ವಯಸ್ಸಾದ ವೃದ್ಧರು ಹಾಗೂ ಅನಕ್ಷರಸ್ಥರನ್ನು ಗುರಿಯಾಗಿಸಿಕೊಂಡು ಅವರ ಖಾತೆಯಿಂದ ಹಣ ತೆಗೆದು ಸರಿಯಾಗಿ ನೀಡದೆ ಮೋಸ ಮಾಡುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟವರ ಎಚ್ಚರ ವಹಿಸಬೇಕು. ಇಲ್ಲದಿದ್ದಲ್ಲಿ ಇದರ ವಿರುದ್ಧ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.