ಅನ್ಯಭಾಷಾ ನಾಮಫಲಕ ಒಡೆದ ಬಿಬಿಎಂಪಿ ಅಧಿಕಾರಿ ಅಮಾನತು!

| Published : Feb 25 2024, 01:46 AM IST

ಅನ್ಯಭಾಷಾ ನಾಮಫಲಕ ಒಡೆದ ಬಿಬಿಎಂಪಿ ಅಧಿಕಾರಿ ಅಮಾನತು!
Share this Article
  • FB
  • TW
  • Linkdin
  • Email

ಸಾರಾಂಶ

ಟಿ.ಸಿ.ಪಾಳ್ಯದಲ್ಲಿ ಮಳಿಗೆಗಳ ಮೇಲಿದ್ದ ಇಂಗ್ಲಿಷ್‌ ನಾಮಫಲಕಗಳನ್ನು ಒಡೆದು ಹಾಕಿದ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರನ್ನು ಅಮಾನತುಗೊಳಿಸಿ ಮಹದೇವಪುರ ಜಂಟಿ ಆಯುಕ್ತರು ಆದೇಶಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬಿಬಿಎಂಪಿಯ ಮಹದೇವಪುರ ವಲಯದ ಹಿರಿಯ ಆರೋಗ್ಯಾಧಿಕಾರಿ ಕೆ.ಎಲ್‌.ವಿಶ್ವನಾಥ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಟಿ.ಸಿ.ಪಾಳ್ಯದಲ್ಲಿ ಮಳಿಗೆಗಳ ಮೇಲಿದ್ದ ಇಂಗ್ಲಿಷ್‌ ನಾಮಫಲಕಗಳನ್ನು ಒಡೆದು ಹಾಕಿದ ಹಿನ್ನೆಲೆಯಲ್ಲಿ ವಿಶ್ವನಾಥ್‌ ಅವರನ್ನು ಅಮಾನತುಗೊಳಿಸಿ ಮಹದೇವಪುರ ಜಂಟಿ ಆಯುಕ್ತರು ಆದೇಶಿಸಿದ್ದಾರೆ.

ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟು ಕನ್ನಡ ಬಳಸಲು ನೋಟಿಸ್‌ ನೀಡಿ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮಳಿಗೆ ಮಾಲೀಕರು ಸೂಚನೆ ಪಾಲನೆ ಮಾಡದಿದ್ದಲ್ಲಿ ಬಟ್ಟೆಯಿಂದ ನಾಮಫಲಕ ಮುಚ್ಚಬೇಕು ಅಥವಾ ಬಿಳಿ ಬಣ್ಣದಿಂದ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಯಾವುದೇ ರೀತಿಯಲ್ಲೂ ಇರುವ ನಾಮಫಲಕ ಒಡೆಯುವುದಕ್ಕೆ ಅಥವಾ ಹಾನಿಗೊಳಿಸುವುದಕ್ಕೆ ಸೂಚನೆ ನೀಡಿರಲಿಲ್ಲ.

ಜನರಿಗೆ ಬಿಬಿಎಂಪಿ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ನಾಮಫಲಕವನ್ನು ಒಡೆದು ಹಾಕಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿತ್ತರವಾಗುತ್ತಿದೆ. ಸರ್ಕಾರಿ ಕೆಲಸದ ಸಂದರ್ಭದಲ್ಲಿ ಬೇಜವಾಬ್ದಾರಿತನದಿಂದ ವರ್ತಿಸಿರುವುದು ಹಾಗೂ ಮೇಲಾಧಿಕಾರಿ ಸೂಚನೆಯಂತೆ ಅಮಾನತುಗೊಳಿಸಿ ಆದೇಶಿಸಲಾಗಿದೆ.ಅಮಾನತು ತೆರವು ಮಾಡದಿದ್ದರೆ ಹೋರಾಟ

ಕಳೆದ ಮೂರು ತಿಂಗಳಿನಿಂದ ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ಹಗಲು-ರಾತ್ರಿ ಎನ್ನದೇ ಶೇ.60ರಷ್ಟು ಕನ್ನಡ ಭಾಷೆಯ ನಾಮಫಲಕ ಅನುಷ್ಠಾನಗೊಳಿಸುವ ಕುರಿತು ಶ್ರಮಿಸುತ್ತಿದ್ದಾರೆ. ಅನ್ಯ ಭಾಷೆಯ ನಾಮಫಲಕ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಆರೋಗ್ಯಾಧಿಕಾರಿ ವಿಶ್ವನಾಥ್‌ ಅವರ ಪಾತ್ರ ಇಲ್ಲ. ಹೀಗಾಗಿ, ಅವರ ಅಮಾನತನ್ನು ಕೂಡಲೇ ವಾಪಾಸ್‌ ಪಡೆಯಬೇಕು. ಇಲ್ಲವಾದರೆ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಯುತ ಬೇಡಿಕೆಗಾಗಿ ಹೋರಾಟ ನಡೆಸಬೇಕಾಗಲಿದೆ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ ರಾಜ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.