ರಾಜಧಾನಿ ಬೆಂಗಳೂರಿನಲ್ಲಿ 400ಕ್ಕೂ ಹೆಚ್ಚು ಅಕ್ರಮ ಕಟ್ಟಡ ನೆಲಸಮಕ್ಕೆ ಬಿಬಿಎಂಪಿ ಆದೇಶ

| Published : Jan 04 2025, 01:33 AM IST / Updated: Jan 04 2025, 04:27 AM IST

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ತೀವ್ರಗೊಳಿಸಿರುವ ಬಿಬಿಎಂಪಿಯ ಅಧಿಕಾರಿಗಳು, ಮಹದೇವಪುರ ಒಂದೇ ವಲಯದಲ್ಲಿ 400ಕ್ಕೂ ಅಧಿಕ ಕಟ್ಟಡಗಳನ್ನು ನೆಲಸಮ ಮಾಡುವಂತೆ ಆದೇಶಿಸಿದ್ದಾರೆ.

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಅನಧಿಕೃತ ಕಟ್ಟಡಗಳ ವಿರುದ್ಧ ಸಮರ ತೀವ್ರಗೊಳಿಸಿರುವ ಬಿಬಿಎಂಪಿಯ ಅಧಿಕಾರಿಗಳು, ಮಹದೇವಪುರ ಒಂದೇ ವಲಯದಲ್ಲಿ 400ಕ್ಕೂ ಅಧಿಕ ಕಟ್ಟಡಗಳನ್ನು ನೆಲಸಮ ಮಾಡುವಂತೆ ಆದೇಶಿಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಮದೇವಪುರದ ಬಾಬುಸಾ ಪಾಳ್ಯದಲ್ಲಿ ಅನಧಿಕೃತ ಕಟ್ಟಡ ಕುಸಿತದಿಂದ 9 ಮಂದಿ ಕಾರ್ಮಿಕರು ಮೃತಪಟ್ಟ ಹಿನ್ನೆಲೆಯಲ್ಲಿ ನಗರದ ಎಲ್ಲ ನಿರ್ಮಾಣ ಹಂತದಲ್ಲಿರುವ ಅನಧಿಕೃತ ಕಟ್ಟಡಗಳನ್ನು ಒಂದು ವಾರದಲ್ಲಿ ಗುರುತಿಸಿ ವರದಿ ನೀಡುವಂತೆ ಬಿಬಿಎಂಪಿಯ ಎಲ್ಲಾ ಎಂಟು ವಲಯದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಬಿಬಿಎಂಪಿಯು ನ.28 ರಿಂದ ಅಧಿಕೃತವಾಗಿ ಸರ್ವೇ ಕಾರ್ಯ ಆರಂಭಿಸಲಾಗಿತ್ತು. ಆ ಪ್ರಕಾರ ಸರ್ವೇ ಕಾರ್ಯ ನಡೆಸಿದ ಬಿಬಿಎಂಪಿಯ ಅಧಿಕಾರಿಗಳು ಈವರೆಗೆ ನಗರದಲ್ಲಿ 2 ಸಾವಿರಕ್ಕೂ ಅಧಿಕ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದು ಗುರುತಿಸಿದ್ದು, ಈ ಪೈಕಿ ಮಹದೇವಪುರ ವಲಯದಲ್ಲಿ ಅತಿ ಹೆಚ್ಚಿನ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದೆ. ಮಹದೇವಪುರ ವಲಯ ಅಧಿಕಾರಿಗಳು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡುತ್ತಿರುವ ಅಧಿಕಾರಿಗಳಿಗೆ ನಿಯಮಾನುಸಾರ ನೋಟಿಸ್‌ ಜಾರಿ ಇದೀಗ ತೆರವುಗೊಳಿಸುವುದಕ್ಕೆ ಆದೇಶಿಸಲಾಗಿದೆ.

402 ಕಟ್ಟಡ ತೆರವಿಗೆ ಆದೇಶ: ನೋಟಿಸ್‌ ಜಾರಿ ಮಾಡಿದ 402 ಕಟ್ಟಡಗಳ ಪೈಕಿ ಮಹದೇವಪುರ ಉಪ ವಿಭಾಗದ ವ್ಯಾಪ್ತಿಯ 285 ನಿರ್ಮಾಣ ಹಂತದ ಕಟ್ಟಡಗಳಿವೆ. ಉಳಿದ 117 ಕಟ್ಟಡಗಳು ಕೆ.ಆರ್‌.ಪುರ ಉಪ ವಿಭಾಗದ ವ್ಯಾಪ್ತಿಯ ಕಟ್ಟಡಗಳಾಗಿವೆ ಎಂದು ಮಹದೇಪುರ ವಲಯದ ಮುಖ್ಯ ಎಂಜಿನಿಯರ್‌ ಲೋಕೇಶ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

24 ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಿ ಸೀಜ್‌: ಮಹದೇವಪುರ ವಲಯದಲ್ಲಿ 24 ನಿರ್ಮಾಣ ಹಂತದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ, ಬಿಬಿಎಂಪಿಯ ಅಧಿಕಾರಿಗಳು ಕಟ್ಟಡವನ್ನು ಸೀಜ್‌ ಮಾಡಲಾಗಿದೆ. ಸೀಜ್‌ ಮಾಡಿದ 24 ಕಟ್ಟಡಗಳ ಪೈಕಿ 15 ಕಟ್ಟಡ ಮಹದೇವಪುರ ಉಪ ವಿಭಾಗಕ್ಕೆ ಸೇರಿದ ಕಟ್ಟಡಗಳಾಗಿದ್ದು, ಉಳಿದ 9 ಕಟ್ಟಡ ಕೆ.ಆರ್‌.ಪುರ ಉಪ ವಿಭಾಗಕ್ಕೆ ಸೇರಿದ ಕಟ್ಟಡಗಳಾಗಿವೆ.

ಉಳಿದ ವಲಯದಲ್ಲಿ ನೀರಸ: ಮಹದೇವಪುರ ವಲಯ ಹೊರತುಪಡಿಸಿದರೆ ಉಳಿದ 7 ವಲಯದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ತಡೆಯುವ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಈ ಬಗ್ಗೆ ವಲಯದ ಮುಖ್ಯ ಎಂಜಿನಿಯರ್‌ ಹಾಗೂ ಜಂಟಿ ಆಯುಕ್ತರನ್ನು ವಿಚಾರಿಸಿದರೆ, ಜವಾಬ್ದಾರಿಯಲ್ಲಿ ಒಬ್ಬರ ಮೇಲೆ ಒಬ್ಬರು ಹಾಕಿ ತಪ್ಪಿಸಿಕೊಳ್ಳುವ ಕೆಲಸ ಮಾಡುತ್ತಿರುವ ಆರೋಪ ಕೇಳಿ ಬರುತ್ತಿದೆ.

ಈವರೆಗೆ ಗುರುತಿಸಲಾದ ಅಕ್ರಮ ಕಟ್ಟಡ ವಿವರ

ವಲಯಕಟ್ಟಡ ಸಂಖ್ಯೆ ಮಹದೇವಪುರ 586

ಯಲಹಂಕ 488

ದಾಸರಹಳ್ಳಿ 203 

ಪೂರ್ವ 240 

ದಕ್ಷಿಣ143 

ಪಶ್ಚಿಮ194

ಬೊಮ್ಮನಹಳ್ಳಿ 230

ಆರ್ ಆರ್‌ ನಗರ 196

ಒಟ್ಟು2,280