ಬೆಡ್‌ಶೀಟ್‌ ವ್ಯಾಪಾರಿ 20 ವರ್ಷ ಹಳೆಯ ಶ್ರೀಗಂಧದ ಮರ ಕದ್ದ! ಪೊಲೀಸರಿಗೆ ಸಿಕ್ಕಿಬಿದ್ದ

| Published : Aug 17 2024, 01:48 AM IST / Updated: Aug 17 2024, 04:47 AM IST

 ARREST12

ಸಾರಾಂಶ

ರಾತ್ರೋರಾತ್ರಿ ಜಮೀನೊಂದರಲ್ಲಿ ಸುಮಾರು 20 ವರ್ಷ ಹಳೆಯ ಶ್ರೀಗಂಧದ ಮರವನ್ನು ಕದ್ದು ಕಡಿದು ಮಾರಾಟ ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

  ಬೆಂಗಳೂರು :  ರಾತ್ರೋರಾತ್ರಿ ಜಮೀನೊಂದರಲ್ಲಿ ಸುಮಾರು 20 ವರ್ಷ ಹಳೆಯ ಶ್ರೀಗಂಧದ ಮರವನ್ನು ಕದ್ದು ಕಡಿದು ಮಾರಾಟ ಮಾಡಿದ್ದ ಆರೋಪಿಯನ್ನು ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಾಗಡಿ ರಸ್ತೆಯ ಸೀಗೆಹಳ್ಳಿ ನಿವಾಸಿ ವೆಂಕಟೇಶ್‌(30) ಬಂಧಿತ. ಆರೋಪಿಯಿಂದ ₹7 ಲಕ್ಷ ಮೌಲ್ಯದ 26 ಕೆ.ಜಿ. ತೂಕದ ಶ್ರೀಗಂಧದ ತುಂಡುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಎಲೆಕ್ಟ್ರಾನಿಕ್‌ ಸಿಟಿ ಸಮೀಪದ ದೊಡ್ಡತೇಗೂರು ನಿವಾಸಿಯೊಬ್ಬರ ಜಮೀನಿನಲ್ಲಿದ್ದ ಸುಮಾರು 20 ಅಡಿ ಎತ್ತರದ ಶ್ರೀಗಂಧದ ಮರ ಕಳ್ಳತನವಾಗಿತ್ತು. ಇನ್‌ಸ್ಪೆಕ್ಟರ್‌ ನವೀನ್‌ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಆರೋಪಿ ಪತ್ತೆಗೆ ವಿವಿಧ ಆಯಾಮಗಳಲ್ಲಿ ತನಿಖೆಗೆ ಇಳಿದಿದ್ದ ಪೊಲೀಸರು, ಘಟನಾ ಸ್ಥಳದ ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ವೇಳೆ ಆರೋಪಿಯ ಸುಳಿವು ಸಿಕ್ಕಿದೆ. ಈ ಸುಳಿವು ಆಧರಿಸಿ ಜು.25ರಂದು ಎಲೆಕ್ಟ್ರಾನಿಕ್‌ ಸಿಟಿ ವಿಟ್ಟಸಂದ್ರ ಗ್ರಾಮದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಶ್ರೀಗಂಧದ ಮರ ತಾನೇ ಕದ್ದಿದ್ದಾಗಿ ತಪ್ಪೊಕೊಂಡಿದ್ದಾನೆ. ಬಳಿಕ ಈತ ನೀಡಿದ ಮಾಹಿತಿ ಮೇರೆಗೆ ಹಾಸನದ ಮರದ ವ್ಯಾಪಾರಿಯಿಂದ ಶ್ರೀಗಂಧದ ಮರದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.

ಬೆಡ್‌ಶೀಟ್‌ ವ್ಯಾಪಾರದ ವೇಳೆ ಶ್ರೀಗಂಧದ ಮರ ನೋಡಿದ್ದ:

ಮಂಡ್ಯ ಮೂಲದ ಆರೋಪಿ ವೆಂಕಟೇಶ್‌ ಹಲವು ವರ್ಷಗಳಿಂದ ನಗರದ ಸೀಗೆಹಳ್ಳಿಯಲ್ಲಿ ನೆಲೆಸಿದ್ದಾನೆ. ಕಳೆದ ಏಳು ವರ್ಷಗಳಿಂದ ಎಲೆಕ್ಟ್ರಾನಿಕ್‌ಸಿಟಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಡ್‌ ಶೀಟ್‌ ವ್ಯಾಪಾರ ಮಾಡಿಕೊಂಡಿದ್ದ. ಆರು ತಿಂಗಳ ಹಿಂದೆ ದೊಡ್ಡತೋಗೂರಿಗೆ ಬೆಡ್‌ ಶೀಟ್‌ ವ್ಯಾಪಾರಕ್ಕೆ ಬಂದಿದ್ದಾಗ ಈ ಶ್ರೀಗಂಧದ ಮರವನ್ನು ನೋಡಿಕೊಂಡು ಹೋಗಿದ್ದ. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಈ ಶ್ರೀಗಂಧದ ಮರ ಕಳವು ಮಾಡಲು ಸಂಚು ರೂಪಿಸಿದ್ದ.

ರಾತ್ರೋರಾತ್ರಿ ಮರ ಕಳವು

ಜು.6ರಂದು ರಾತ್ರಿ ಇಬ್ಬರು ಸ್ನೇಹಿತರೊಂದಿಗೆ ಜಮೀನಿನ ಬಳಿ ಬಂದು ಶ್ರೀಗಂಧದ ಮರವನ್ನು ಕತ್ತರಿಸಿ ತುಂಡು ಮಾಡಿ ವಾಹನದಲ್ಲಿ ತುಂಬಿಕೊಂಡು ಪರಾರಿಯಾಗಿದ್ದ. ಬಳಿಕ ಹಾಸನದ ಮರದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ ಹಣ ಪಡೆದುಕೊಂಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಶ್ರೀಗಂಧದ ಮರ ಕಳ್ಳತನಕ್ಕೆ ಆರೋಪಿ ಜತೆಗೆ ಕೈಜೋಡಿಸಿದ್ದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.