ಮೆಟ್ರೋ, ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತಷ್ಟು ಹೊರೆ: ಏಪ್ರಿಲ್‌ನಿಂದ ಕಸಕ್ಕೆ ಶುಲ್ಕ ವಸೂಲಿ

| Published : Mar 15 2025, 11:48 PM IST

ಮೆಟ್ರೋ, ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಬೆಂಗಳೂರಿಗರಿಗೆ ಮತ್ತಷ್ಟು ಹೊರೆ: ಏಪ್ರಿಲ್‌ನಿಂದ ಕಸಕ್ಕೆ ಶುಲ್ಕ ವಸೂಲಿ
Share this Article
  • FB
  • TW
  • Linkdin
  • Email

ಸಾರಾಂಶ

ಮೆಟ್ರೋ, ಬಸ್‌ ಪ್ರಯಾಣ ಟಿಕೆಟ್‌ ದರ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿಗರಿಗೆ ಏಪ್ರಿಲ್‌ನಿಂದ ಮತ್ತೊಂದು ಹೊರೆ ಹೇರುವುದಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ಏಪ್ರಿಲ್‌ನಿಂದ ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಿಸುವುದಕ್ಕೆ ಶುಲ್ಕ ವಸೂಲಿ ಜಾರಿಗೊಳಿಸಲು ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮೆಟ್ರೋ, ಬಸ್‌ ಪ್ರಯಾಣ ಟಿಕೆಟ್‌ ದರ ಏರಿಕೆಯಿಂದ ತತ್ತರಿಸಿರುವ ಬೆಂಗಳೂರಿಗರಿಗೆ ಏಪ್ರಿಲ್‌ನಿಂದ ಮತ್ತೊಂದು ಹೊರೆ ಹೇರುವುದಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದ್ದು, ಏಪ್ರಿಲ್‌ನಿಂದ ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಿಸುವುದಕ್ಕೆ ಶುಲ್ಕ ವಸೂಲಿ ಜಾರಿಗೊಳಿಸಲು ನಿರ್ಧರಿಸಿದೆ.

ಕಳೆದ ಐದಾರು ವರ್ಷಗಳಿಂದ ನಗರದಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ. ಜನರಿಗೆ ಹೊರೆ ಆಗಲಿದೆ ಎಂದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ವಿಚಾರವನ್ನು ಕೈ ಬಿಡಲಾಗಿತ್ತು. ಇತ್ತಿಚಿಗೆ ನಗರದ ಕಸ ವಿಲೇವಾರಿ ಜವಾಬ್ದಾರಿಯನ್ನು ಹೊತ್ತುಕೊಂಡ ಘನತ್ಯಾಜ್ಯ ನಿರ್ವಹಣಾ ಕಂಪನಿ (ಬಿಎಸ್‌ಡಬ್ಲ್ಯುಎಂಎಲ್‌) ಮೂಲಕ ಶತಾಯಗತಾಯ ಸೇವಾ ಶುಲ್ಕ ವಸೂಲಿಗೆ ಮುಂದಾಗಿದ್ದು, ಕಳೆದ ನವೆಂಬರ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಆ ಪ್ರಸ್ತಾವನೆಗೆ ಕಳೆದ ಸೋಮವಾರ ರಾಜ್ಯ ಸರ್ಕಾರ ಅನುಮೋದನೆ ನೀಡಿ, ಏಪ್ರಿಲ್‌ನಿಂದ ಜಾರಿಗೊಳಿಸುವಂತೆ ನಿರ್ದೇಶಿಸಿದೆ.

ಈ ಹಿಂದೆ ವಿದ್ಯುತ್ ಬಿಲ್‌ನೊಂದಿಗೆ ಘನತ್ಯಾಜ್ಯ ಸೇವಾಶುಲ್ಕ ಸಂಗ್ರಹಿಸುವ ಚರ್ಚೆಗಳು ನಡೆಸಲಾಗಿತ್ತು. ಆದರೆ, ಗೃಹ ಜ್ಯೋತಿ ಯೋಜನೆಯಿಂದ ಬಹುತೇಕರು ವಿದ್ಯುತ್ ಬಿಲ್ ಪಾವತಿಸುವ ಪ್ರಮೇಯವೇ ಇಲ್ಲ. ಹೀಗಾಗಿ, ಆಸ್ತಿ ತೆರಿಗೆಯೊಂದಿಗೆ ಸೇವಾ ಶುಲ್ಕವನ್ನು ಸಂಗ್ರಹಿಸುವುದಕ್ಕೆ ತೀರ್ಮಾನಿಸಲಾಗಿದೆ. ಸಂಗ್ರಹವಾಗುವ ಸೇವಾ ಶುಲ್ಕವನ್ನು ಬಿಬಿಎಂಪಿಯು, ಬಿಎಸ್‌ಡಬ್ಲ್ಯುಎಂಎಲ್‌ಗೆ ವರ್ಗಾವಣೆ ಮಾಡುವುದಕ್ಕೆ ಯೋಜನೆ ರೂಪಿಸಲಾಗಿದೆ.₹800 ಕೋಟಿ ಸಂಗ್ರಹ?:

ಘನತ್ಯಾಜ್ಯ ನಿಯಮದಲ್ಲಿ ವಸತಿ ಕಟ್ಟಡದಿಂದ ಮಾಸಿಕ ಗರಿಷ್ಠ ₹400 ವರೆಗೆ ವಸೂಲಿಗೆ ತೀರ್ಮಾನಿಸಲಾಗಿದೆ. ಇದರಿಂದ ಬಿಎಸ್‌ಡಬ್ಲ್ಯುಎಂಎಲ್‌ಗೆ ವಾರ್ಷಿಕ ಸುಮಾರು ₹600 ರಿಂದ ₹800 ಕೋಟವರೆಗೆ ಸಂಗ್ರಹವಾಗಲಿದೆ. ಈ ಮೊತ್ತದಲ್ಲಿ ನಗರದ ಕಸ ವಿಲೇವಾರಿ ನಿರ್ವಹಣೆ ಮಾಡಬಹುದು. ಸರ್ಕಾರ ಮತ್ತು ಬಿಬಿಎಂಪಿಯ ಅನುದಾನ ಪಡೆಯುವ ಅಗತ್ಯ ಇರುವುದಿಲ್ಲ ಎಂಬುದು ಕಂಪನಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಶುಲ್ಕದ ಹೊರೆ ಮನೆ ಮಾಲೀಕರಿಗೆ:

ಒಂದು ಕಟ್ಟಡದಲ್ಲಿ 10 ಮನೆ ಇದ್ದರೆ, ಪ್ರತಿ ಮನೆಗೆ ಮಾಸಿಕವಾಗಿ ಸೇವಾ ಶುಲ್ಕ ವಿಧಿಸಲಾಗುವುದು. ಈ ಸೇವಾ ಶುಲ್ಕವನ್ನು ಆಸ್ತಿ ತೆರಿಗೆಯೊಂದಿಗೆ ಸೇರ್ಪಡೆಗೊಳಿಸಲಾಗುವುದು. ಮನೆ ಅಥವಾ ಕಟ್ಟಡ ಮಾಲೀಕ ಈ ಸೇವಾ ಶುಲ್ಕವನ್ನು ಪಾವತಿ ಮಾಡಬೇಕು. ನಗರದಲ್ಲಿ ಎಷ್ಟು ಕಟ್ಟಡ ಇವೆ. ಅದರಲ್ಲಿ ಎಷ್ಟು ಮನೆಗಳಿವೆ ಎಂಬುದರ ಬಗ್ಗೆ ಘನತ್ಯಾಜ್ಯ ನಿರ್ವಹಣಾ ಕಂಪನಿ ಸರ್ವೆ ನಡೆಸಿ ಮಾಹಿತಿ ಸಂಗ್ರಹಿಸುವುದಕ್ಕೆ ನಿರ್ಧರಿಸಿದೆ.

ಘನತ್ಯಾಜ್ಯ ಸೆಸ್‌ ಹೆಚ್ಚಳವೇ?:

ತ್ಯಾಜ್ಯ ಸಂಗ್ರಹಿಸುವ ಸೇವಾ ಶುಲ್ಕ ವಸೂಲಿ ಜಾರಿಯೊಂದಿಗೆ ಬಿಬಿಎಂಪಿಯು ಆಸ್ತಿ ತೆರಿಗೆಯೊಂದಿಗೆ ಈಗಾಗಲೇ ಸಂಗ್ರಹಿಸಲಾಗುತ್ತಿರುವ ಕಸದ ಸೆಸ್‌ ಹೆಚ್ಚಳ ಮಾಡುವುದಕ್ಕೆ ಚರ್ಚೆ ನಡೆಸಲಾಗುತ್ತಿದೆ. ಸೆಸ್‌ ಹೆಚ್ಚಳ ಪ್ರಮಾಣ ಅಧಿಕೃತವಾಗಿ ಈವರೆಗೆ ಯಾವುದೇ ಆದೇಶ ಹೊರಡಿಸಿಲ್ಲ. ಈ ಸೆಸ್‌ ಅನ್ನು ಬಿಬಿಎಂಪಿಯು ವಿವಿಧ ಕಾರ್ಯಗಳಿಗೆ ಬಳಕೆ ಮಾಡಲಿದೆ.

ವಸತಿ ಕಟ್ಟಡಗಳ ಮಾಸಿಕ ಶುಲ್ಕದ ವಿವರ (ರು.)

600 ಚದರಡಿವರೆಗೆ₹10

601ರಿಂದ 1000 ಚದರಡಿ ₹50

1001 ರಿಂದ 2000 ಚದರಡಿ₹100

2001 ರಿಂದ 3000 ಚದರಡಿ₹150

3001 ರಿಂದ 4000 ಚದರಡಿ₹200

4000 ಚದರಡಿಗಿಂತ ಹೆಚ್ಚಿದ್ದರೆ₹400

ಖಾಲಿ ನಿವೇಶನಗಳು ಪ್ರತಿ ಚ.ಅಡಿಗೆ₹0.20

ವಾಣಿಜ್ಯ ಕಟ್ಟಡಗಳು, ಸಂಸ್ಥೆಗಳು (ಮಾಸಿಕ ಶುಲ್ಕ)ನಿತ್ಯ 5 ಕೆ.ಜಿವರೆಗೆ ಉತ್ಪಾದನೆಗೆ₹500ನಿತ್ಯ 10 ಕೆ.ಜಿವರೆಗೆ ಉತ್ಪಾದನೆಗೆ₹1,400ನಿತ್ಯ 25 ಕೆ.ಜಿವರೆಗೆ ಉತ್ಪಾದನೆ3,500ನಿತ್ಯ 50 ಕೆ.ಜಿವರೆಗೆ ಉತ್ಪಾದನೆ₹7,000 ನಿತ್ಯ 100 ಕೆ.ಜಿವರೆಗೆ ಉತ್ಪಾದನೆ₹14,000