ಬೆಂಗಳೂರು ಟೆಕ್ಕಿ ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು

| Published : Dec 12 2024, 01:45 AM IST / Updated: Dec 12 2024, 04:40 AM IST

Cyber ​​Fraud

ಸಾರಾಂಶ

ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಠಾಣೆ ಪೊಲೀಸರ ವಿಶೇಷ ತಂಡ ಉತ್ತರ ಪ್ರದೇಶಕ್ಕೆ ತೆರಳಿದ್ದು, ಮೃತನ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ.

 ಬೆಂಗಳೂರು : ಸಾಫ್ಟ್‌ವೇರ್ ಉದ್ಯೋಗಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಾರತ್ತಹಳ್ಳಿ ಠಾಣೆ ಪೊಲೀಸರ ವಿಶೇಷ ತಂಡ ಉತ್ತರ ಪ್ರದೇಶಕ್ಕೆ ತೆರಳಿದ್ದು, ಮೃತನ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ.

ನಗರದಲ್ಲಿ ಇತ್ತೀಚಿಗೆ ತಮ್ಮ ಸಾವಿಗೆ ಪತ್ನಿ ನಿಖಿತಾ ಸಿಂಘಾನಿಯಾ ಹಾಗೂ ಆಕೆಯ ಕುಟುಂಬದವರ ಕಿರುಕುಳ ಕಾರಣವೆಂದು 26 ಪುಟಗಳ ಡೆತ್‌ ನೋಟ್ ಅನ್ನು ಬರೆದಿಟ್ಟು ಅತುಲ್ ಸಾವಿಗೆ ಶರಣಾಗಿದ್ದರು. ಈ ಸಂಬಂಧ ಮೃತನ ಸಹೋದರನ ಮಾರತ್ತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಡೆತ್‌ ನೋಟ್ ಹಾಗೂ ಆತ್ಮಹತ್ಯೆ ಮುನ್ನ ಅತುಲ್‌ ಮಾಡಿರುವ ವಿಡಿಯೋ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆತ್ಮಹತ್ಯೆ ಕುರಿತು ತನಿಖೆ ಪ್ರಗತಿಯಲ್ಲಿದೆ. ಈಗಾಗಲೇ ಪ್ರಾಥಮಿಕ ಹಂತದಲ್ಲಿ ಲಭ್ಯವಾದ ಸಾಂದರ್ಭಿಕ ಸಾಕ್ಷ್ಯಗಳನ್ನು ಆಧರಿಸಿ ಮೃತನ ಪತ್ನಿ ನಿಖಿತಾ ಹಾಗೂ ಆಕೆಯ ಕುಟುಂಬದವರನ್ನು ವಿಚಾರಣೆ ನಡೆಸಲು ಬುಧವಾರ ಬೆಳಗ್ಗೆ ಉತ್ತರಪ್ರದೇಶಕ್ಕೆ ರಾಜ್ಯದ ಪೊಲೀಸರು ತೆರಳಿದ್ದಾರೆ. ಜೋನ್‌ಪುರ ನಗರದಲ್ಲಿ ಮೃತನ ಪತ್ನಿ ಪೋಷಕರು ನೆಲೆಸಿದ್ದು, ಕಳೆದ 2 ವರ್ಷಗಳಿಂದ ತವರು ಮನೆಯಲ್ಲಿ ಅತುಲ್ ಪತ್ನಿ ವಾಸವಾಗಿರುವುದು ಗೊತ್ತಾಗಿದೆ. ಮೊದಲು ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸಲಾಗುತ್ತದೆ. ತನಿಖೆಗೆ ಅವರು ಅಸಹಕಾರ ತೋರಿದರೆ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ತಮ್ಮ ಸಹೋದರನ ವಿರುದ್ಧ ದಾಖಲಿಸಿದ್ದ ಸುಳ್ಳು ಪ್ರಕರಣಗಳ ಇತ್ಯರ್ಥಕ್ಕೆ ₹3 ಕೋಟಿ ಕೊಡುವಂತೆ ನಿಖಿತಾ ಕುಟುಂಬದವರು ಒತ್ತಾಯಿಸಿದ್ದರು ಎಂದು ಮೃತ ಅತುಲ್ ಸಹೋದರ ಬಿಕಾಸ್ ಕುಮಾರ್ ಆರೋಪಿಸಿದ್ದಾರೆ. ಈ ದೂರು ಆಧರಿಸಿ ಅತುಲ್‌ ಪತ್ನಿ ನಿಖಿತಾ ಮಾವ ಅನುರಾಗ್‌ ಸಿಂಘಾನಿಯಾ, ಅತ್ತೆ ನಿಶಾ ಹಾಗೂ ಬಾಮೈದ ಸುಶೀಲ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವಂತೆ ಅಣಕು: 2019ರಲ್ಲಿ ನಿಖಿತಾ ಜತೆಯಲ್ಲಿ ಸೋದರ ಅತುಲ್ ವಿವಾಹವಾಗಿದ್ದು, ದಂಪತಿಗೆ ಗಂಡು ಮಗುವಿದೆ. ದಂಪತಿ ಮಧ್ಯೆ ಮನಸ್ತಾಪ ಮೂಡಿದ್ದು, ಪ್ರತ್ಯೇಕವಾಗಿದ್ದರು. ನನ್ನ ಸೋದರನ ವಿರುದ್ಧ ನಿಖಿತಾ ಹಾಗೂ ಆಕೆಯ ಪೋಷಕರು ಚಿತಾವಣೆ ಮಾಡಿ ಸುಳ್ಳು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣಗಳ ಇತ್ಯರ್ಥಕ್ಕೆ ₹3 ಕೋಟಿ ನೀಡುವಂತೆ ಒತ್ತಾಯಿಸುತ್ತಿದ್ದರು. ಅಲ್ಲದೆ ತನ್ನ ಮಗನನ್ನು ಭೇಟಿಯಾಗಲು ಪ್ರತ್ಯೇಕವಾಗಿ ₹30 ಲಕ್ಷ ಕೊಡುವಂತೆ ನಿಖಿತಾ ಆಗ್ರಹಿಸಿದ್ದರು. ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆ ಸಲುವಾಗಿ ನ್ಯಾಯಾಲಯಕ್ಕೆ ಅತುಲ್‌ ಹಾಜರಾಗಿದ್ದರು. ಆಗ ಹಣ ಕೊಡದಿದ್ದರೆ ಆತ್ಮಹತ್ಯೆ ಮಾಡಿಕೊಂಡು ಸಾಯುವಂತೆ ನಿಖಿತಾ ಪೋಷಕರು ಅಣಕಿಸಿದ್ದರು. ಇದರಿಂದ ಮನನೊಂದು ಅತುಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರ ಬಿಕಾಸ್ ಕುಮಾರ್ ಆಪಾದಿಸಿದ್ದಾರೆ. ಅತುಲ್ ಆತ್ಮಹತ್ಯೆ ಪ್ರಕರಣ ಸಂಬಂಧ ತಮ್ಮ ಆರೋಪಗಳಿಗೆ ಮತ್ತಷ್ಟು ಪುರಾವೆಗಳನ್ನು ಒದಗಿಸುವಂತೆ ಮೃತನ ಸೋದರ ಬಿಕಾಸ್ ಕುಮಾರ್ ಅವರಿಗೆ ಮಾರತ್ತಹಳ್ಳಿ ಪೊಲೀಸರು ಸೂಚಿಸಿದ್ದಾರೆ.

2019ರಲ್ಲಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಮೂಲಕ ಪರಿಚಯವಾಗಿ ತರುವಾಯ ಇಷ್ಟಪಟ್ಟು ಬಿಹಾರ ರಾಜ್ಯದ ಅತುಲ್ ಹಾಗೂ ಉತ್ತರಪ್ರದೇಶದ ನಿಖಿತಾ ವಿವಾಹವಾಗಿದ್ದರು. ಬೆಂಗಳೂರಿನಲ್ಲೇ ಸಾಫ್ಟ್‌ವೇರ್ ಕಂಪನಿಯಲ್ಲಿ ಆಕೆ ಸಹ ಉದ್ಯೋಗದಲ್ಲಿದ್ದಳು. ಆದರೆ ಮದುವೆಯಾಗಿ 1 ವರ್ಷ ತುಂಬುವ ವೇಳೆಗೆ ಅತುಲ್ ದಾಂಪತ್ಯದಲ್ಲಿ ಬಿರುಕು ಮೂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

120 ಬಾರಿ ಕೋರ್ಟ್‌ಗೆ ಹಾಜರು: ತಮ್ಮ ವಿರುದ್ಧ ಪತ್ನಿ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣ ಸಂಬಂಧ ನ್ಯಾಯಾಲಯ ವಿಚಾರಣೆಗಾಗಿ 120ಕ್ಕೂ ಹೆಚ್ಚು ಬಾರಿ ಉತ್ತರಪ್ರದೇಶಕ್ಕೆ ಅತುಲ್ ಪ್ರಯಾಣಿಸಿದ್ದರು ಎಂದು ಪೊಲೀಸರಿಗೆ ಮೃತನ ಪೋಷಕರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಅತುಲ್ ಕಾರ್ಯನಿರ್ವಹಿಸುತ್ತಿದ್ದರು. ತಮ್ಮ ವಿರುದ್ಧ ಪತ್ನಿ ಸುಳ್ಳು ಕೇಸ್‌ಗಳನ್ನು ದಾಖಲಿಸಿದ್ದರಿಂದ ಮನನೊಂದಿದ್ದರು. ಅಲ್ಲದೆ ಕಳೆದ ಐದಾರು ತಿಂಗಳಿಂದ 120ಕ್ಕೂ ಹೆಚ್ಚು ಬಾರಿ ನ್ಯಾಯಾಲಯದ ವಿಚಾರಣೆಗಾಗಿ ಉತ್ತರಪ್ರದೇಶಕ್ಕೆ ಅತುಲ್ ಹೋಗಿದ್ದ ಎಂದು ಪೋಷಕರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಜನರ ಆಕ್ರೋಶ: ಟೆಕ್ಕಿ ಅತುಲ್ ಆತ್ಮಹತ್ಯೆ ಪ್ರಕರಣ‍ವು ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ವರದಕ್ಷಿಣೆ ದೌರ್ಜನ್ಯ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂಬ ಕೂಗು ಪ್ರಬಲವಾಗಿ ಕೇಳಿ ಬಂದಿದೆ. ಇನ್ನು ಇದೇ ಪ್ರಕರಣ ಮುಂದಿಟ್ಟು ಕೌಟುಂಬಿಕ ಕಲಹದಲ್ಲಿ ನೊಂದು ಬೆಂದಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಎಕ್ಸ್‌ ಜಾಲಣದಲ್ಲಿ ‘ನಿಖಿತಾ ಸಿಂಘಾನಿಯಾ’ ಹ್ಯಾಶ್ ಟ್ಯಾಗ್‌ ಬಳಸಿ ಸುಮಾರು 81ಸಾವಿರಕ್ಕೂ ಅಧಿಕ ಜನರು ಟ್ವಿಟ್ ಮಾಡಿದ್ದು, ಬುಧವಾರ ಇದೇ ಪ್ರಕರಣವು ರಾಷ್ಟ್ರ ಮಟ್ಟದಲ್ಲಿ ಪ್ರಮುಖ ವಿಷಯವಾಗಿ ಟ್ರೆಂಡಿಂಗ್‌ನಲ್ಲಿತ್ತು.

ಟ್ರಂಪ್, ಎಲಾನ್‌ ಮಸ್ಕ್ ಬಳಿ ಸಹಾಯಕ್ಕೆ ಮನವಿ: ತಮ್ಮ ಕೌಟುಂಬಿಕ ಕಲಹದಿಂದ ಜಿಗುಪ್ಸೆಗೊಂಡಿದ್ದ ಅತುಲ್‌, ತಮ್ಮ ಸಂಕಷ್ಟಕ್ಕೆ ಸ್ಪಂದಿಸುವಂತೆ ಅಮೇರಿಕಾದ ನಿಯೋಜಿತ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್ ಹಾಗೂ ಎಕ್ಸ್‌ ತಾಣದ ಮಾಲೀಕ ಎಲಾನ್‌ ಮಸ್ಕ್‌ ಅವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ವರದಕ್ಷಿಣೆ ದೌರ್ಜನ್ಯ ಪ್ರಕರಣದ ಇತ್ಯರ್ಥಕ್ಕೆ ತಮ್ಮ ಪತ್ನಿ 3 ಕೋಟಿ ರು. ಬೇಡಿಕೆ ಇಟ್ಟಿದ್ದು, ಇಷ್ಟು ದೊಡ್ಡ ಮಟ್ಟದ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆರ್ಥಿಕವಾಗಿ ತಮಗೆ ಸಹಾಯ ಮಾಡುವಂತೆ ಟ್ರಂಪ್ ಹಾಗೂ ಮಾಸ್ಕ್ ಅವರಿಗೆ ಅತುಲ್‌ ಮನವಿ ಮಾಡಿದ್ದರು ಎಂದು ತಿಳಿದು ಬಂದಿದೆ.