ಲಾರಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

| Published : Jan 17 2024, 01:46 AM IST

ಸಾರಾಂಶ

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಬೈಕ್‌ ಸಂಚಾರ ನಿಷೇಧ, ನಿಯಮ ಉಲ್ಲಂಘಿಸಿ ಬೈಕ್ ಚಾಲನೆ, ಗೆಜ್ಜಲಗೆರೆ ಗ್ರಾಮದ ಸಮೀಪ ಮನ್ಮುಲ್ ಎದುರು ಘಟನೆ, ಕೇರಳ ರಾಜ್ಯದ ಕೋವೆಲ್ ಕಾನ್ ಕೋಟೆ ಗ್ರಾಮದ ನಾರಾಯಣ ಪುತ್ರ ತೇಜನ್ ಅಪಘಾತದಲ್ಲಿ ಮೃತಪಟ್ಟ ಬೈಕ್ ಚಾಲಕ.

ಕನ್ನಡಪ್ರಭ ವಾರ್ತೆ ಮದ್ದೂರು

ದ್ವಿಚಕ್ರ ವಾಹನಗಳ ಸಂಚಾರ ನಿಷೇಧ ಉಲ್ಲಂಘನೆ ಮಾಡಿ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ಲಾರಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಸಮೀಪ ಮನ್ಮುಲ್ ಎದುರು ಮಂಗಳವಾರ ಮುಂಜಾನೆ ಜರುಗಿದೆ.

ಕೇರಳ ರಾಜ್ಯದ ಕೋವೆಲ್ ಕಾನ್ ಕೋಟೆ ಗ್ರಾಮದ ನಾರಾಯಣ ಪುತ್ರ ತೇಜನ್ ಅಪಘಾತದಲ್ಲಿ ಮೃತಪಟ್ಟ ಬೈಕ್ ಚಾಲಕ. ಮೃತ ತೇಜನ್ ತಮ್ಮ ಬಜಾಜ್ ಕೆಟಿಎಂ ಬೈಕ್ ನಲ್ಲಿ ಬೆಂಗಳೂರಿನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿದ್ದರು. ಗೆಜ್ಜಲಗೆರೆ ಮನ್ಮಲ್ ಸಮೀಪ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಹೋಗುತ್ತಿದ್ದ ಲಾರಿ ಚಾಲಕ ಲಾರಿಯನ್ನು ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿಸಿದಾಗ ಬೈಕ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಅಪಘಾತದ ನಂತರ ಚಾಲಕ ಲಾರಿಯನ್ನು ಸ್ಥಳದಲ್ಲೇ ನಿಲ್ಲಿಸದೆ ಪರಾರಿಯಾಗುತ್ತಿದ್ದಾಗ ಮಾಹಿತಿ ಅರಿತ ಮಂಡ್ಯ ಗ್ರಾಮಾಂತರ ಪೊಲೀಸರು ಲಾರಿಯನ್ನು ವಶಕ್ಕೆ ತೆಗೆದುಕೊಂಡು ಮದ್ದೂರು ಸಂಚಾರಿ ಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಸಂಚಾರಿ ಠಾಣೆ ಪಿಎಸ್ಐ ಕಮಲಾಕ್ಷಿ ಪ್ರಕರಣ ದಾಖಲೆ ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಏಣಿಯಿಂದ ಬಿದ್ದು ಮಗುವಿಗೆ ಗಾಯ

ಮಳವಳ್ಳಿ:

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಮನೆ ಸ್ವಚ್ಛ ಮಾಡಲು ಹಾಕಿದ್ದ ಏಣಿಯಿಂದ ಆಯತಪ್ಪಿ ಬಿದ್ದು ಮಗು ಗಾಯಗೊಂಡಿರುವ ಘಟನೆ ದಾಸನದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತೋಟದ ಮನೆಯಲ್ಲಿ ಕೆಲಸ ಮಾಡಿಕೊಂಡು ವಾಸವಿದ್ದ ತಿ.ನರಸೀಪುರ ಮೂಲದ ರಂಗಸ್ವಾಮಿ ಅವರ ನಾಲ್ಕು ವರ್ಷದ ಹೆಣ್ಣು ಮಗು ಮನೆಯಲ್ಲಿ ಸ್ವಚ್ಛಗೊಳಿಸಲು ಹಾಕಿದ್ದ ಏಣಿ ಏರಲು ಹೋಗಿ ಬಿದ್ದು ಗಾಯಗೊಂಡಿದೆ. ತಕ್ಷಣ ಮಗುವಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.