ಬೈಕ್‌ಗಳ ಡಿಕ್ಕಿ: ಅಪ್ಪ, ಮಗಳು ಸಾವು

| Published : Oct 23 2023, 12:15 AM IST

ಸಾರಾಂಶ

ಎರಡು ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಅಪ್ಪ ಮತ್ತು ಮಗಳು ಮೃತಪಟ್ಟಿರುವ ಘಟನೆ ಶನಿವಾರ ಗುಡೇಕೋಟೆ ಕೆರೆ ಬಳಿ ಜರುಗಿದೆ.

ಕನ್ನಡಪ್ರಭ ವಾರ್ತೆ ಕೂಡ್ಲಿಗಿ

ಎರಡು ಬೈಕ್ ಗಳು ಪರಸ್ಪರ ಡಿಕ್ಕಿಯಾಗಿ ಅಪ್ಪ ಮತ್ತು ಮಗಳು ಮೃತಪಟ್ಟಿರುವ ಘಟನೆ ಶನಿವಾರ ಗುಡೇಕೋಟೆ ಕೆರೆ ಬಳಿ ಜರುಗಿದೆ.

ಯರ್ರೋಬನಹಟ್ಟಿ ಗ್ರಾಮದ ಗೋವಿಂದ(30) ಮತ್ತು ಋಷಿ(3) ಮೃತಪಟ್ಟವರು. ಗೋವಿಂದ ತನ್ನ ಪತ್ನಿ ಮಲ್ಲಮ್ಮ ಹಾಗೂ ಮಗಳು ಋಷಿ ಜತೆ ಬೈಕ್‌ನಲ್ಲಿ ಸ್ವಗ್ರಾಮ ಯರ್ರೋಬನಹಟ್ಟಿಗೆ ಹೋಗುತ್ತಿದ್ದಾಗ ಗುಡೇಕೋಟೆ ಕೆರೆ ಬಳಿ ಕೂಡ್ಲಿಗಿ ಕಡೆಯಿಂದ ಬಂದ ಮತ್ತೊಂದು ಬೈಕ್ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಸ್ಥಳದಲ್ಲೇ ಬಾಲಕಿ ಋಷಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯ ತಂದೆ ಗೋವಿಂದ ಬಳ್ಳಾರಿ ವಿಮ್ಸ್ ಅಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಅಲ್ಲದೆ ತಾಯಿ ಮಲ್ಲಮ್ಮ ಸಹ ತೀವ್ರವಾಗಿ ಗಾಯಗೊಂಡಿದ್ದು, ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೊಂದು ಬೈಕ್‌ನ ಸವಾರ ರಾಘವೇಂದ್ರ ಸಹ ಗಾಯಗೊಂಡಿದ್ದು, ಅತನು ಚಿಕಿತ್ಸೆಗೆ ದಾಖಲಾಗಿದ್ದಾನೆ.

ಘಟನಾ ಸ್ಥಳಕ್ಕೆ ಗುಡೇಕೋಟೆ ಠಾಣಾ ಪಿಎಸ್ಐ ಸಿ. ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಮಡುಗಟ್ಟಿದ ದುಃಖ:

ಅಪಘಾತ ಘಟನೆ ತಿಳಿದ ಕೂಡಲೆ ಯರ್ರೋಬನಹಟ್ಟಿ ಗ್ರಾಮದಲ್ಲಿ ಮೌನ ಅವರಿಸಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಮೂರು ವರ್ಷದ ಬಾಲಕಿ ಸ್ಥಳದಲ್ಲಿ ಮೃತಪಟ್ಟಿರುವುದನ್ನು ನೋಡಿದ ಜನರು ಕಣ್ಣೀರು ಹಾಕುತ್ತಿರುವ ದೃಶ್ಯ ಮನ ಕಲಕುವಂತಿತ್ತು.