ಬಿಜೆಪಿ, ಹಿಂದೂಪರ ಸಂಘಟನೆಗಳ ಪ್ರತಿಭಟನೆ

| Published : May 29 2024, 12:56 AM IST

ಸಾರಾಂಶ

ವೀರ ಸಾವರ್ಕರ್‌ ನಾಮಫಲಕಕ್ಕೆ ಮಸಿ ಬಳಿದಿರುವುದನ್ನು ಖಂಡಿಸಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಯಲಹಂಕ

ಯಲಹಂಕ ಉಪನಗರದ ಮದರ್ ಡೈರಿ ವೃತ್ತದ ಸಮೀಪವಿರುವ ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕಕ್ಕೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿರುವುದನ್ನು ಖಂಡಿಸಿ ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ವೀರ ಸಾವರ್ಕರ್ ಮೇಲ್ಸೇತುವೆ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.

ವೀರ ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿದಿರುವ ಘಟನೆ ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರು ಮೇಲ್ಸೇತುವೆ ಬಳಿಗೆ ದೌಡಾಯಿಸಿ ಬಂದು, ಕೃತ್ಯವನ್ನು ಖಂಡಿಸಿದರು, ಕೃತ್ಯ ಎಸಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಅರಾಜಕತೆ, ಗೂಂಡಾಗಿರಿ ಹೆಚ್ಚಾಗಿದೆ. ಕಿಡಿಗೇಡಿಗಳಿಗೆ ಲಂಗುಲಗಾಮು, ಭಯ ಎರಡೂ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಎನ್‌ಎಸ್‌ಯುಐ ಕಾರ್ಯಕರ್ತರು ವೀರ ಸಾವರ್ಕರ್ ಮೇಲ್ಸೇತುವೆಯ ನಾಮಫಲಕಕ್ಕೆ ಮಸಿ ಬಳಿದಿದ್ದಾರೆ. ಇದೊಂದು ಹೇಯ್ಯವಾದ ಮತ್ತು ಹೇಡಿತನದ ಕೃತ್ಯವಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ನಂತರ ಶಾಸಕ ಎಸ್.ಆರ್.ವಿಶ್ವನಾಥ್, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಯಲಹಂಕ ಉಪನಗರ ಠಾಣೆಗೆ ತೆರಳಿ ದುಷ್ಕೃತ್ಯ ಎಸಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.

ಘಟನೆಗೆ ಸಂಬಂಧಿಸಿದಂತೆ ಯಲಹಂಕ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಗಡಿ ರಸ್ತೆಯ ಯುವಕ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ವೀರ ಸಾವರ್ಕರ್ ಜಯಂತಿ ಆಚರಣೆ

ಪ್ರತಿಭಟನೆಯ ನಂತರ ಸಂಜೆ ವೇಳೆ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಅಸಂಖ್ಯಾತ ಕಾರ್ಯಕರ್ತರು ವೀರ ಸಾವರ್ಕರ್ ಮೇಲ್ಸೇತುವೆ ಬಳಿಗೆ ತೆರಳಿ, ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ವೀರ ಸಾವರ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವೀರ ಸಾವರ್ಕರ್ ಅವರ ಜಯಂತಿ ಆಚರಿಸಿದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರ ಪರ ವಿವಿಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.